ರಾಯಚೂರು: ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಡುಗೆ ಅನಿಲ ಬೆಲೆ ಏರಿಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಜನರ ಜೇಬು ಲೂಟಿ ಮಾಡುತ್ತಿದೆ. ಅಂಬಾನಿ -ಆದಾನಿಗಳ ಏಜೆಂಟ್‌ರಂತೆ ಬಿಜೆಪಿ ಸರ್ಕಾರ ವರ್ತಿಸುತ್ತಿದೆ. ಜನ ವಿರೋಧಿ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದ ಪ್ರತಿಭಟನಾಕಾರರು ಗ್ಯಾಸ್ ಸಿಲಿಂಡರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿ, ಮೋದಿ ಸರ್ಕಾರ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೂಮ್ಮೆ ಹೆಚ್ಚಿಸಿದೆ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ. ಗಡಿ ದಾಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಕೂಡ ಕ್ರಮವಾಗಿ 250, 102 ರೂ. ಹೆಚ್ಚಾಗಿದೆ. ಇದು ಬಡಜನರ ಮೇಲೆ ಮತ್ತಷ್ಟು ಹೊರೆಯಾಗಿಸಿದೆ ಎಂದರು.
ಕೋವಿಡ್ ಮಹಾಮಾರಿಯಿಂದ ಬದುಕು ಕಳೆದುಕೊಂಡ ಸಾಮಾನ್ಯ ಜನರನ್ನು ಬೀದಿಗೆ ಬರುವಂತೆ ಮಾಡಿದೆ. ಈ ಸರ್ಕಾರದ ಕಣ್ಣು, ಕಿವಿಗಳು ಕೆಲಸ ಮಾಡುತ್ತಿವೆಯೇ? ಈ ಸರ್ಕಾರಕ್ಕೆ ಕಿಂಚಿತ್ತಾದರೂ ಜನರ ಬಗ್ಗೆ ಕಾಳಜಿಯಿದೆಯೇ? ಈ ಸರ್ಕಾರ ಯಾರ ಪರವಾಗಿದೆ? ಎಂದು ಪ್ರಶ್ನಿಸಿದರು. ಜಿಲ್ಲಾ ಸಮಿತಿ ಸದಸ್ಯ ಮಹೇಶ್ ಚಿಕಲಪರ್ವಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೋರೆಟ್ ಮಾಲೀಕರ 10,7 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಿದೆ. ಶೇ.33 ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ಮುಂದುವರಿಸುತ್ತಿದೆ ಎಂದು ದೂರಿದರು.
ಈ ನಿಟ್ಟಿನಲ್ಲಿ ಜನ ಹೋರಾಟಕ್ಕೆ ಧುಮುಕಬೇಕು. ಜನ ಸಮಿತಿ ರಚಿಸಿಕೊಂಡು ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಪಕ್ಷದ ಕಾರ್ಯಕರ್ತರಾದ ಮಲ್ಲನಗೌಡ, ಕಾರ್ತಿಕ್, ವಿನೋದ್, ಹೇಮಂತ್, ಪೀರ್‌ಸಾಬ್, ಬಸವರಾಜ್ ಸೇರಿ ಅನೇಕರಿದ್ದರು.