ಬೆಳಗಾವಿ:ನಗರದ ಬಸವನಗಲ್ಲಿ ಅಪಾರ್ಟ್ ಮೆಂಟ್‌ನಲ್ಲಿ ರವಿವಾರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಉಡುಪಿ ಮೂಲದ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದಾರೆ.
ಆದಿಉಡುಪಿ ಮೂಲದ, ಪ್ರಸ್ತುತ ಬೆಳಗಾವಿಯಲ್ಲಿ ನೆಲೆಸಿರುವ ಕಮಾಲಾಕ್ಷಿ ಗೋಪಾಲಕೃಷ್ಣ ಭಟ್ (78) ಮತ್ತು ಅವರ ಮೊಮ್ಮಗ ಹೇಮಂತ್ ಭಟ್ (28) ಮೃತಪಟ್ಟವರು. ಕಮಲಾಕ್ಷಿ ಅವರ ಪತಿ ಗೋಪಾಲಕೃಷ್ಣ ಭಟ್, ಸೊಸೆ ಲಲಿತಾ ಮೋಹನ್ ಭಟ್ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಭವಿಸಿದ ತತ್‌ಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಐವರ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ರವಿವಾರ ಮಧ್ಯಾಹ್ನ ಹೊಸ ಸಿಲಿಂಡರ್ ಜೋಡಿಸಲಾಗುತ್ತಿತ್ತು. ಈ ವೇಳೆ ತಾಂತ್ರಿಕ ಸಮಸ್ಯೆ ಅಥವಾ ಅನ್ಯ ಕಾರಣದಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿದ್ದು, ಕೂಡಲೇ ಬೆಂಕಿಯ ಕೆನ್ನಾಲಗೆ ಮನೆಯನ್ನು ಆವರಿಸಿತ್ತು. ಸ್ಫೋಟದ ಶಬ್ದ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಮನೆಯಲ್ಲಿದ್ದವರನ್ನು ಹೊರಗೆ ತೆಗೆಯಲು ಸ್ಥಳೀಯರು ಶ್ರಮಿಸಿದರು.
ಅಗ್ನಿಶಾಮಕ ದಳದ ಸಿಬಂದಿ ಹಾಗೂ ಪೊಲೀಸರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಮನೆ ಸಂಪೂರ್ಣ ಸುಟ್ಟು ಹೋಗಿದೆ. ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಹೇಮಂತ್ ಮೋಹನ ಭಟ್ ಅವರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಹೈದರಾಬಾದ್‌ಗೆ ತೆರಳಿದ್ದ ಅವರು ಶನಿವಾರವಷ್ಟೇ ಮನೆಗೆ ಆಗಮಿಸಿದ್ದರು. ಹೇಮಂತ್ ಸಹೋದರ ರೋಹಿತ್ ಇದೇ ಸಂದರ್ಭದಲ್ಲಿ ಸ್ನೇಹಿತನನ್ನು ಬಿಡಲು ಹೊರಗಡೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದ ಕೂಡಲೇ ಮನೆಯಲ್ಲಿದ್ದ ಹೇಮಂತ್ ಅವರ ತಂದೆ ಮೋಹನ್ ಅವರು ವಿದ್ಯುತ್ ದೀಪ ಹಚ್ಚದಂತೆ ತಿಳಿಸಲು ಅಕ್ಕಪಕ್ಕದ ಮನೆಗಳಿಗೆ ಹೋಗಿದ್ದರು. ಹೇಳಿ ವಾಪಸ್ ಬರುವಷ್ಟರಲ್ಲಿ ದುರಂತ ಸಂಭವಿಸಿದೆ. ಮೋಹನ್ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.