ಬೆಂಗಳೂರು : ಹೋಟೆಲ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಹೋಟೆಲ್‌ನ 10 ಮಂದಿ ಸಿಬ್ಬಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಇಂದಿರಾನಗರ ಠಾಣೆ ವ್ಯಾಪ್ತಿಯ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ನ್ಯೂ ಶಾಂತಿಸಾಗರ ಹೋಟೆಲ್‌ನಲ್ಲಿ ಶನಿವಾರ ಸಂಜೆ ಅಗ್ನಿ ಅವಘಡ ಸಂಭವಿಸಿದೆ. ಕೆಲಸಗಾರರಾದ ರಸಿಂಹ, ಗಿರೀಶ್, ಜಗ್ಗ, ಗಂಗಾಧರ, ಕೃಷ್ಣ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ನರಸಿಂಹ ಮತ್ತು ಗಿರೀಶ್ ತೀವ್ರ ಸುಟ್ಟಗಾಯಗಳಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಹೋಟೆಲ್‌ನ ಗ್ಯಾಸ್ ಪೈಪ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಈ ವೇಳೆ ಅಡುಗೆ ಕೋಣೆಯಲ್ಲಿ ಸ್ಟೌವ್‌ನಲ್ಲಿ ಅಡುಗೆ ಮಾಡಲಾಗುತ್ತಿತ್ತು. ಗ್ಯಾಸ್ ಸೋರಿಕೆಯಾಗಿ ಏಕಾಏಕಿ ಸ್ಫೋಟಗೊಂಡ ಪರಿಣಾಮ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಸಿಬ್ಬಂದಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ದೌಡು: ಇನ್ನು ವಿಷಯ ತಿಳಿಯುತ್ತಿದ್ದಂತೆ ಆಗ್ನಿಶಾಮಕ ದಳ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದು, ಹೋಟೆಲ್ ಒಳಗಿದ್ದ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಹೊರತಂದರು. ಬೆಂಕಿಯ ಕಿನ್ನಾಲಿಗೆ ಬೇರೆಡೆ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಇಂದಿರಾನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆಕೆಆರ್ ಡಿಬಿಗೆ 5000 ಕೋಟಿ ರೂ. ಅನುದಾನ: ಖಂಡ್ರೆ
ಸ್ಫೋಟಕ್ಕೆ ಗಾಜುಗಳು ಪುಡಿ: ಗ್ಯಾಸ್ ಸೋರಿಕೆಯಿಂದ ಉಂಟಾದ ಸ್ಫೋಟಕ್ಕೆ ಹೋಟೆಲ್‌ನ ಗಾಜುಗಳು ಛಿದ್ರವಾಗಿದ್ದು, ಪೀಠೊಪಕರಣಗಳಿಗೆ ಹಾನಿಯಾಗಿದೆ. ಪೈಪ್‌ನಲ್ಲಿ ಗ್ಯಾಸ್ ಸೋರಿಕೆಯಾಗುವುದನ್ನು ಗಮನಿಸಿದ ಸಿಬ್ಬಂದಿ, ಕೂಡಲೇ ಗ್ರಾಹಕರನ್ನು ಹೋಟೆಲ್‌ನಿಂದ ಹೊರಗೆ ಕಳುಹಿಸಿದ್ದಾರೆ. ಹೋಟೆಲ್ ಕೆಲಸಗಾರರು ಹೊರಬರಬೇಕು ಎನ್ನುವಷ್ಟರಲ್ಲಿ ಸ್ಫೋಟಗೊಂಡಿದೆ.
ಅವಘಡದ ವೇಳೆ ಹೋಟೆಲ್‌ನಲ್ಲಿ ನಾಲ್ಕು ಸಿಲಿಂಡರ್ ಗಳು ಇದ್ದವು. ಅದೃಷ್ಟವಶಾತ್ ಒಂದು ಸಿಲಿಂಡರ್ ಸಹ ಸ್ಫೋಟಗೊಂಡಿಲ್ಲ. ಒಂದು ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದರೆ ಭಾರೀ ಪ್ರಮಾಣದ ಅನಾಹುತಗಳು ಸಂಭವಿಸುವ ಸಾಧ್ಯತೆ ಇತ್ತು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.