Advertisement
ಯಾದಗಿರಿ ಜಿಲ್ಲಾ ಕೇಂದ್ರದಿಂದ 24 ಕಿ.ಮೀ. ಇರುವ ಕಂದಕೂರಿನಲ್ಲಿ ಇತಿಹಾಸ ಪ್ರಸಿದ್ಧ ಕೊಂಡಮಾಯಿದೇವಿ ಮಂದಿರ ಎಷ್ಟು ಪ್ರಸಿದ್ಧಿ ಪಡೆದಿದೆಯೋ, ಅಷ್ಟೇ ಜನಪ್ರಿಯತೆಯನ್ನು ಲಕ್ಷ್ಮಣ್ ಅವರ ಭವಾನಿ ಹೋಟೆಲಿನ ಮಂಡಕ್ಕಿ ಒಗ್ಗರಣೆಯೂ ಪಡೆದುಕೊಂಡಿದೆ. ಶುದ್ಧ ಎಣ್ಣೆ, ಹಾಲು, ಟೊಮೆಟೋ, ಉಳ್ಳಾಗಡ್ಡಿ, ಮೆಣಸಿನಕಾಯಿ, ಜೀರಿಗೆ, ಸಾಸಿವೆ, ಅರಶಿಣ, ಬೆಳ್ಳುಳ್ಳಿ, ಶುಂಠಿಯನ್ನು ಬಳಸಿ ಮಾಡಿದ ಬಿಸಿ ಬಿಸಿಯಾದ, ಘಮಘಮಿಸುವ ಮಂಡಕ್ಕಿ ಒಗ್ಗರಣೆ ಎಂಥವರ ಬಾಯಲ್ಲೂ ನೀರು ತರಿಸುತ್ತದೆ.
Related Articles
Advertisement
“ಈ ಪುಟ್ಟ ಹೋಟೆಲ್ ನಡೆಸಿಕೊಂಡೇ ಬದುಕು ಕಟ್ಟಿಕೊಂಡಿರುವೆ. ಮೂವರು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಿರುವೆ. ಮುಖ್ಯವಾಗಿ, ಗ್ರಾಹಕರು ಸಂತೃಪ್ತರಾದರೆ, ಅದಕ್ಕಿಂತ ಖುಷಿ ಮತ್ತೂಂದಿಲ್ಲ’ ಎನ್ನುತ್ತಾರೆ ಲಕ್ಷ್ಮಣ್. ಮೊದಲು ಮಧ್ಯಾಹ್ನದ ಊಟದ ವ್ಯವಸ್ಥೆ ಇತ್ತು. ಈಗ ಪಕ್ಕದಲ್ಲೇ ಅಣ್ಣನ ಮಗಳು ಖಾನಾವಳಿ ಪ್ರಾರಂಭಿಸಿದ ನಂತರ ಊಟ ಕೊಡುವುದನ್ನು ನಿಲ್ಲಿಸಿದ್ದಾರೆ. ಇಲ್ಲಿ ಮಂಡಕ್ಕಿಯ ಜೊತೆಗೆ ಮಿರ್ಚಿ, ಬಜ್ಜಿ, ಪೂರಿ-ಪಿಟ್ಲಾ ಕೂಡ ತಯರಾಗುತ್ತದೆ.
ಲಭ್ಯವಿರುವ ತಿಂಡಿ: ಬೆಳಗ್ಗೆ 6.30ಯಿಂದ ಮಧ್ಯಾಹ್ನ 12.30ರವರೆಗೆ ಪೂರಿ(ನಾಲ್ಕಕ್ಕೆ 20 ರೂ.), ಒಗ್ಗರಣೆ ಮಂಡಕ್ಕಿ ಸಿಗುತ್ತೆ. ಮಧ್ಯಾಹ್ನದ ನಂತರ ಒಗ್ಗರಣೆ ಮಂಡಕ್ಕಿ, ಬಜ್ಜಿ, ಟೀ, ಕಾಫಿ, ತಂಪು ಪಾನೀಯ ಸಿಗುತ್ತದೆ. ದರ 20 ರೂ. ಒಳಗೆ.
ಪಿಟ್ಲಾ ಸೂಪರ್: ಪೂರಿ ಜೊತೆ ಕೊಡುವ ಪಿಟ್ಲಾ(ಸಾಗು) ತಿಂಡಿಯ ರುಚಿಯನ್ನು ಹೆಚ್ಚಿಸುತ್ತೆ. ಹುಳಗಟ್ಟಿ, ಟೊಮೆಟೋ, ಖಾರದ ಪುಡಿ, ಮಸಾಲೆ ಹಾಕಿ ಕಡ್ಲೆ ಇಟ್ಟು ಹಾಕಿ ಮಾಡುವ ಪಿಟ್ಲಾ ಪೂರಿ ರುಚಿಯನ್ನು ಹೆಚ್ಚಿಸಿದೆ.
ಹೋಟೆಲ್ ಸಮಯ: ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ, ವಾರದ ರಜೆ ಇಲ್ಲ.
ಹೋಟೆಲ್ ವಿಳಾಸ: ಯಾದಗಿರಿಯಿಂದ 24 ಕಿ.ಮೀ., ಕಂದಕೂರ ಗ್ರಾಮ, ಬಸ್ ನಿಲ್ದಾಣ ಎದುರು. ಶ್ರೀ ಭವಾನಿ ಹೋಟೆಲ್
* ಭೋಗೇಶ ಆರ್. ಮೇಲುಕುಂಟೆ