Advertisement

ಗ್ರಾ.ಪಂ. ಚುನಾವಣೆ: ಮತ ಚಲಾಯಿಸಿದ ರಾಜೇಶ್ ನಾಯ್ಕ್, ಯು.ಟಿ.ಖಾದರ್, ರಮಾನಾಥ ರೈ

10:15 AM Dec 22, 2020 | keerthan |

ಮಂಗಳೂರು: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಡಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಇಂದು ಮತದಾನ ಆರಂಭವಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 106 ಗ್ರಾಮ ಪಂಚಾಯತ್ ಗಳ 1631 ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. 3845 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

 

ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭದಿಂದಲೇ ಚುರುಕು ಪಡೆದಿದೆ. ಬೆಳಿಗ್ಗೆ 9 ಗಂಟೆಯವರೆಗೆ ದ.ಕ ಜಿಲ್ಲೆಯಲ್ಲಿ ಒಟ್ಟು ಶೇ.14.48 ಮತದಾನ ನಡೆದಿದೆ. ಮಂಗಳೂರು ಶೇ. 14.6, ಮೂಡಬಿದರೆ ಶೇ. 15.64, ಬಂಟ್ಟಾಳ ತಾಲೂಕಿನಲ್ಲಿ  ಶೇ. 13.75 ಮತದಾನವಾಗಿದೆ.

ಶಾಸಕರು, ಮಾಜಿ ಸಚಿವರಾದಿಯಾಗಿ ಪ್ರಭಾವಿಗಳು ಬೆಳಗ್ಗೆಯೇ ಮತದಾನದಲ್ಲಿ ಪಾಲ್ಗೊಂಡರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ತೆಂಕ ಎಡಪದವು ಶಾಲೆಯಲ್ಲಿ ಮತ ಚಲಾಯಿಸಿದರು.

Advertisement

ಶಾಸಕ ಯು.ಟಿ. ಖಾದರ್ ಬೋಳಿಯಾರ್ ರಂತಡ್ಕದ ಜಾರದಗುಡ್ಡೆ ಶಾಲೆಯಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕಳ್ಳಿಗೆಯ ತೊಡಂಬಿಲ ಶಾಲೆಯಲ್ಲಿ ಮತ ಚಲಾಯಿಸಿದರು.

ಮಾಣಿಲ ಶ್ರೀಧಾಮ ಮಹಾಲಕ್ಷ್ಮಿಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಗ್ರಾಮದ ಮುರುವ ಶಾಲೆಯಲ್ಲಿ ಮತದಾನ ಮಾಡಿದರು.

ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ

ಕೋವಿಡ್-19 ಸೋಂಕು ಭೀತಿಯ ಕಾರಣದಿಂದ ಮತದಾನಕ್ಕೆ ಬರುವವರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಕೆಲವೆಡೆ ಆಶಾ ಕಾರ್ಯಕರ್ತರು, ಪೊಲೀಸರು ಥರ್ಮಾಮೀಟರ್ ನಲ್ಲಿ ಮತದಾರರ ದೇಹದ ಉಷ್ಣತೆ ಪರೀಕ್ಷೆ ಮಾಡಿ ಮತಗಟ್ಟೆಯೊಳಗೆ ಬಿಡುತ್ತಿದ್ದಾರೆ.  ಸರದಿ ಸಾಲಿನಲ್ಲಿ ನಿಲ್ಲುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪೊಲೀಸರು ಸೂಚನೆ ನೀಡುತ್ತಿದ್ದು, ಅನಾವಶ್ಯಕ ಗುಂಪುಗೂಡದಂತೆ ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂತು.

ಪವರ್ ಕಟ್: ಮಂಗಳೂರು ತಾಲೂಕಿನ ಕುತ್ತಾರು ಶಾಲೆಯಲ್ಲಿ ಬೆಳಗ್ಗೆ 4.30 ರಿಂದ ಪವರ್ ಕಟ್ ಆದ ಕಾರಣ ಚುನಾವಣಾ ಸಿಬ್ಬಂದಿ ಬೆಳಕಿಲ್ಲದೆ ಪರದಾಡಿದ ಪ್ರಸಂಗ ನಡೆಯಿತು. ಬಳಿಕ ಕ್ಯಾಂಡಲ್ ಮತ್ತು ಮೊಬೈಲ್ ಟಾರ್ಚ್ ನಲ್ಲಿ ಕರ್ತವ್ಯ ನಿರ್ವಹಿಸಬೇಕಾಯಿತು.

ಉಳ್ಳಾಲ ವ್ಯಾಪ್ತಿಯ ಹಲವು ಮತಗಟ್ಟೆಗಳಲ್ಲಿ ವಿದ್ಯುತ್ ಸಂಪರ್ಕದ ಕೊರತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಸಮಸ್ಯೆ ಎದುರಿಸುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next