Advertisement

ಗರ್ಮಾ ಗರಂ ದೋಸೆ…

09:12 PM Oct 06, 2019 | Sriram |

ಸಕ್ಕರೆ ನಾಡು ಮಂಡ್ಯ – ರಾಗಿ ಮುದ್ದೆ, ಮದ್ದೂರು ವಡೆ, ಇಡ್ಲಿಗಷ್ಟೇ ಅಲ್ಲ; ದೋಸೆಗೂ ಫೇಮಸ್ಸು. ಇದಕ್ಕೆ ಹರ್ಷ ಕೆಫೆಯ ಕೊಡುಗೆ ಕೂಡ ಇದೆ. ಮಂಡ್ಯದ ಜನಪ್ರಿಯ ಹೋಟೆಲ್‌ಗ‌ಳಲ್ಲಿ ಈ ಕೆಫೆ ಕೂಡ ಒಂದು. ಇಲ್ಲಿನ ಮಾಡುವ ತುಪ್ಪದ ದೋಸೆ, ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಎಸ್‌.ಎಲ್‌.ಗೋಪಾಲ್‌(ಗೋಪಿ) ಈ ಕೆಫೆ ಮಾಲಿಕರು. ಮೂಲತಃ ಸಕಲೇಶಪುರದವರಾದ ಗೋಪಾಲ್‌, ಚಿಕ್ಕ ವಯಸ್ಸಿನಲ್ಲೇ ಹೋಟೆಲ್‌ ಸಪ್ಲೆ„ಯರ್‌ ಆಗಿ ಕೆಲಸ ಪ್ರಾರಂಭಿಸಿದವರು. 7ನೇ ತರಗತಿ ಓದುತ್ತಿದ್ದ ವೇಳೆ, ಮನೆಯಲ್ಲಿ ಬಡತನ ಇದ್ದ ಕಾರಣ ಶಾಲೆ ಬಿಟ್ಟು, 1964ರಲ್ಲಿ ಸಕಲೇಶಪುರದಲ್ಲಿದ್ದ ಹೋಟೆಲ್‌ ಆನಂದ್‌ ಭವನ್‌ಗೆ 8 ರೂ. ತಿಂಗಳ ಸಂಬಳಕ್ಕೆ ಸಪ್ಲೆ„ಯರ್‌ ಆಗಿ ಸೇರಿಕೊಂಡರು. ನಂತರ ಹಾಸನದ ಮಾಡ್ರನ್‌, ಮೋತಿ ಹೋಟೆಲ್‌ನಲ್ಲಿ ಕೆಲಸ ಮಾಡಿದ್ರು. ಸ್ವಲ್ಪ ದಿನಗಳ ನಂತರ ತುಮಕೂರಿಗೆ ಬಂದು ಲಂಚ್‌ ಹೋಂನಲ್ಲಿ ಕೆಲ ತಿಂಗಳು ಕೆಲಸ ಮಾಡಿ, ಅಲ್ಲಿಯೂ ಬಿಟ್ಟು ಕೊನೆಗೆ 1972ನಲ್ಲಿ ಮಂಡ್ಯಕ್ಕೆ ಬಂದರು. ಆಗ ಆಸ್ಪತ್ರೆ ರಸ್ತೆಯಲ್ಲಿದ್ದ ಹೋಟೆಲ್‌ ಶ್ರೀಹರ್ಷದಲ್ಲಿ 400 ರೂ. ತಿಂಗಳ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡರು, 11 ವರ್ಷ ಅಲ್ಲೇ ಕೆಲಸ ಮಾಡಿ, ಅಡುಗೆ ಮಾಡುವುದನ್ನು ಚೆನ್ನಾಗಿ ಕಲಿತ ಗೋಪಾಲ್‌ಗೆ, ಸ್ವಂತಕ್ಕೆ ಹೋಟೆಲ್‌ ಆರಂಭಿಸಬೇಕೆಂಬ ಆಸೆ ಹುಟ್ಟಿತು. ಈ ವಿಷಯವನ್ನು ಹೋಟೆಲ್‌ ಮಾಲೀಕರಾದ ಕೆ.ಸತ್ಯನಾರಾಯಣ ಅವರ ಬಳಿ ಹೇಳಿಕೊಂಡರು.

Advertisement

ಸತ್ಯನಾರಾಯಣ ಅವರು, 20 ಸಾವಿರ ರೂ. ಹಣ ಕೊಟ್ಟು, ಹೋಟೆಲ್‌ ಆರಂಭಿಸಲು ನೆರವಾದರು. ಆಗ ಕಲ್ಲಹಳ್ಳಿಯ ಬಳಿ ನವೆಂಬರ್‌ 4, 1983ರಲ್ಲಿ ಒಂದು ಮಳಿಗೆ ಬಾಡಿಗೆ ಪಡೆದ ಗೋಪಾಲ್‌, ಹೋಟೆಲ್‌ ಪಾರಂಭಿಸಿದ್ರು. ಅದಕ್ಕೆ ಹರ್ಷ ಕೆಫೆ, ಸತ್ಯನಾರಾಯಣ ಕೃಪೆ ಎಂದು ನಾಮಫ‌ಲಕ ಹಾಕಿಸಿದರು. ಕೆಲವು ವರ್ಷಗಳ ನಂತರ ವಿವಿ ರಸ್ತೆಗೆ ಕೆಫೆಯನ್ನು ಶಿಫ್ಟ್ ಮಾಡಿದರು. ವಿಶೇಷ ಅಂದ್ರೆ 1986ರಲ್ಲಿ ಇವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ ನಂಜುಂಡ, ಈಗಲೂ ಕೆಫೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಗೋಪಾಲ್‌ ಅವರಿಗೆ ವಯಸ್ಸಾದ ಕಾರಣ, ಮಗ ಶಶಿಧರ್‌ಗೆ ಕೆಫೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಹರ್ಷ ಹೋಟೆಲ್‌ ದೋಸೆ ರುಚಿ:
ಗೋಪಾಲ್‌ ಅವರು, ಪ್ರತ್ಯೇಕವಾಗಿ ಹೋಟೆಲ್‌ ಆರಂಭಿಸಿದ್ರೂ ಹಿಂದೆ ಹೋಟೆಲ್‌ನಲ್ಲಿ ಮಾಡುತ್ತಿದ್ದ ತುಪ್ಪದ ದೋಸೆ, ಇತರೆ ತಿಂಡಿಯನ್ನು ಇಲ್ಲಿಯೂ ಮುಂದುವರಿಸಿದರು. ಹರ್ಷ ಹೋಟೆಲಿನ ಮೂಲ ಮಾಲೀಕರಾದ ಸತ್ಯನಾರಾಯಣ, ಆಗಾಗ್ಗೆ ತಮ್ಮ ಶಿಷ್ಯನ ಹೋಟೆಲಿಗೆ ಭೇಟಿ ನೀಡಿ ಸಲಹೆ ನೀಡುತ್ತಿದ್ದರು. ಅಡುಗೆಯ ರುಚಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಶ್ರೀಹರ್ಷ ಹೋಟೆಲ್‌ 2010ರಲ್ಲಿ ಮುಚ್ಚಿದ್ರೂ ಅದರ ತಿಂಡಿಯ ರುಚಿ ಹರ್ಷ ಕೆಫೆಯಲ್ಲಿ ಸಿಗುತ್ತಿದೆ.

ಮಿನಿ ಮಸಾಲೆ ವಿಶೇಷ:
ಕೆಫೆನಲ್ಲಿ ಮಾಡೋದು ಸೆಟ್‌ ದೋಸೆ(ದರ 40 ರೂ.) ಮತ್ತು ಮಿನಿ ಮಸಾಲೆ(ದರ 24 ರೂ.) ಮಾತ್ರ. ನಂದಿನಿ ತುಪ್ಪ ಬಳಸಿ ದೋಸೆ ಮಾಡುವುದರಿಂದ ರುಚಿ, ಪರಿಮಳ ಮತ್ತು ಗರಿಗರಿಯಾಗಿರುತ್ತದೆ. ಸಂಜೆಯ ವೇಳೆಯಲ್ಲಂತೂ ಈ ಕೆಫೆ ಗ್ರಾಹಕರಿಂದ ಹೌಸ್‌ಫ‌ುಲ್‌ ಆಗಿರುತ್ತದೆ.

ಇತರೆ ತಿಂಡಿ:
ಇಡ್ಲಿ (ಸಿಂಗಲ್‌ 12 ರೂ.), ವಡೆ (22 ರೂ.) ಉಪ್ಪಿಟ್ಟು, ಕೆಸರಿಬಾತು (ತಲಾ 20 ರೂ.) ರವೆ ಇಡ್ಲಿ (22 ರೂ.), ಪೂರಿ (30 ರೂ.), ರೈಸ್‌ಬಾತ್‌(30 ರೂ.). ಸಂಜೆ ದೋಸೆ ಜೊತೆ ತಟ್ಟೆ ಇಡ್ಲಿ (20 ರೂ.), ಶ್ಯಾವಿಗೆ ಬಾತ್‌(30 ರೂ.), ರವೆ ವಾಂಗೀ ಬಾತ್‌, ಬಜ್ಜಿ, ಪಕೋಡ, ವೆಜಿಟಬಲ್‌ ಪಕೋಡ, ಕ್ಯಾಪ್ಸಿಕಾಂ ಬಜ್ಜಿ, ಮೆಣಸಿನ ಕಾಯಿ ಬಜ್ಜಿ ಹೀಗೆ… ನಾಲ್ಕೈದು ಉಪಾಹಾರ ಮಾಡಲಾಗುತ್ತದೆ. ದರ 20 ರಿಂದ 25 ರೂ..

Advertisement

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ಗಂಟೆ, ಸಂಜೆ 4 ರಿಂದ ರಾತ್ರಿ 8.30ರವರೆಗೆ, ಶುಕ್ರವಾರ ವಾರದ ರಜೆ

ಹೋಟೆಲ್‌ ವಿಳಾಸ:
ಹರ್ಷ ಕೆಫೆ, ಹೊಸಹಳ್ಳಿ ಸರ್ಕಲ್‌ ಬಳಿ, ವಿ.ವಿ.ರೋಡ್‌, ಮಂಡ್ಯ ನಗರ

Advertisement

Udayavani is now on Telegram. Click here to join our channel and stay updated with the latest news.

Next