ಬಜಪೆ/ಉಡುಪಿ: ಮಾಂಸಾಹಾರವಿರಲಿ, ಸಸ್ಯಾಹಾರವಿರಲಿ ಅಡುಗೆಯ ರುಚಿ ದುಪ್ಪಟ್ಟು ಮಾಡುವ ಬೆಳ್ಳುಳ್ಳಿಗೆ ಈಗ ರಾಜ ಮರ್ಯಾದೆ. ಕಳೆದೊಂದು ವಾರದಿಂದ ಬೆಳ್ಳುಳ್ಳಿಯ ಮಾರುಕಟ್ಟೆ ದರ ಏರುಗತಿಯಲ್ಲಿದೆ.
ಪ್ರಥಮ ದರ್ಜೆ ಬೆಳ್ಳುಳ್ಳಿಯ ರಖಂ ದರವೇ ಈಗ ಕೆ.ಜಿ.ಗೆ 435 ರೂ. ಇದೆ. ಚಿಲ್ಲರೆಯಾಗಿ ಕೆ.ಜಿ.ಗೆ 520 ರೂ.ಗಳಲ್ಲಿ ಮಾರಾಟವಾಗುತ್ತಿದೆ. ದ್ವಿತೀಯ ದರ್ಜೆಯದೂ ಕೆ.ಜಿ.ಗೆ 380 ರೂ.ಗಳಿಂದ 450 ರೂ.ಗಳಂತೆ ಬಿಕರಿಯಾಗುತ್ತಿದೆ.
ಕಳೆದ 10 ವರ್ಷಗಳಲ್ಲಿ ಇದು ದಾಖಲೆ ಏರಿಕೆ ಎಂದು ಬಜಪೆಯ ವ್ಯಾಪಾರಿಗಳು ತಿಳಿಸಿದ್ದಾರೆ. 10 ವರ್ಷಗಳ ಹಿಂದೆ ಕೆ.ಜಿ.ಗೆ 300 ರೂ. ಕಂಡಿತ್ತು. ಬಳಿಕ ಚೀನದಿಂದ ದೊಡ್ಡ ಗಾತ್ರದ ಬೆಳ್ಳುಳ್ಳಿಗಳು ಬಂದ ಕಾರಣ ದರ ಕಡಿಮೆಯಾಗಿತ್ತು.
ಹವಾಮಾನ ವೈಪರೀತ್ಯ ಕಾರಣ
ತಿಂಗಳ ಹಿಂದೆ ಕೆಜಿಗೆ 180-250 ರೂ. ವರೆಗೆ ಇತ್ತು. ಉತ್ತರ ಭಾರತದಿಂದ ಕರ್ನಾಟಕ ಕರಾವಳಿ ಮಾರುಕಟ್ಟೆಗೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ. ಹವಾಮಾನ ವೈಪರೀತ್ಯ, ಮಳೆಯ ಕೊರತೆ ಹಿನ್ನೆಲೆಯಲ್ಲಿ ಇಳುವರಿ ಕುಸಿತವಾಗಿದೆ. ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಪೂರೈಕೆಯಾಗದ ಕಾರಣ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ತರಕಾರಿ ವ್ಯಾಪಾರಿ ಶಫೀಕ್.
ದರ ಏರಿಕೆಯ ಕಾರಣ ರಖಂ ವ್ಯಾಪಾರಿಗಳು ಇದರ ಬಗ್ಗೆ ಹೆಚ್ಚು ಆಸಕ್ತಿ ತೋರಿಸದೇ ಇರುವುದು ಕಂಡು ಬಂದಿದೆ. ಚಿಲ್ಲರೆ ವ್ಯಾಪಾರಿಗಳಿಗೆ ಇದರ ದರ ಚಿನ್ನದ ದರದಂತೆ ಕಾಣುತ್ತಿದೆ. 10 ಗ್ರಾಂ ಕೂಡ 5 ರೂಪಾಯಿಗಿಂತ ಜಾಸ್ತಿ ಬೀಳುತ್ತದೆ. ಕೆಲವು ಅಂಗಡಿಯವರು ಬೆಳ್ಳುಳ್ಳಿ ಮಾರುವುದನ್ನೇ ಸ್ಥಗಿತ ಮಾಡಿದ್ದಾರೆ.