Advertisement

ಗರಿಕೆಮಠಕ್ಕೆ ವರ್ಷವಿಡೀ ನಳ್ಳಿ ನೀರೇ ಆಧಾರ

11:56 PM May 08, 2019 | sudhir |

ಕೋಟ: ದೊಡ್ಡ ಫೈಬರ್‌ ಟ್ಯಾಂಕ್‌ಗಳನ್ನು ಮನೆಯ ಮುಂದೆ ಜೋಡಿಸಿಟ್ಟು ಗ್ರಾ.ಪಂ.ನವರು ನೀಡುವ ಟ್ಯಾಂಕರ್‌ ನೀರಿಗಾಗಿ ಹಾತೋರೆಯುತ್ತಿರುವ ನಿವಾಸಿಗಳು. ಅಡುಗೆ, ಬಟ್ಟೆ , ಸ್ನಾನ ಎಲ್ಲಾದಕ್ಕೂ ಲೆಕ್ಕವಿಟ್ಟು ನೀರಿನ ಖರ್ಚು. ಇದು ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಗರಿಕೆಮಠ ನಿವಾಸಿಗಳ ನಿತ್ಯದ ನೀರಿನ ಗೋಳು.

Advertisement

ಈ ಪ್ರದೇಶ ಕಲ್ಲು ಗಣಿಗಾರಿಕೆಗೆ ಹೆಸರುವಾಸಿ ಯಾಗಿದ್ದು ಸುತ್ತ ಬಾವಿ ನೀರಿನ ಲಭ್ಯತೆ ಇಲ್ಲ. ಹೀಗಾಗಿ ಇಲ್ಲಿನ ಸುಮಾರು 15 ಮನೆಯವರು ಗ್ರಾ.ಪಂ.ನೀಡುವ ನಳ್ಳಿ ನೀರನ್ನೇ ವರ್ಷವಿಡೀ ಅವಲಂಬಿಸಿದ್ದಾರೆ. ಇಲ್ಲಿನ ಕಲ್ಲುಗಣಿಯಲ್ಲಿ ದುಡಿಯುವ ನೂರಾರು ಕಾರ್ಮಿಕರೂ ಇದೇ ನೀರನ್ನು ಅವಲಂಬಿಸಿದ್ದಾರೆ.

ಕೆಟ್ಟುಹೋದ ಪಂಪ್‌; ಕೆಸರು ತುಂಬಿದ ಬಾವಿ

ಇಲ್ಲಿಗೆ ನೀರು ಸರಬರಾಜು ಮಾಡುವ ಸರಕಾರಿ ಬಾವಿಯಲ್ಲಿ ಹೂಳು ತುಂಬಿದ್ದು, ಪಂಪ್‌ ಕೂಡ ಹಾಳಾಗಿರುವುದಿಂದ ಜನವರಿ ಮಧ್ಯ ಭಾಗದಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಮಾರ್ಚ್‌ ಕೊನೆಯ ವಾರದಿಂದ ಗ್ರಾ.ಪಂ. ನವರು ಟ್ಯಾಂಕರ್‌ ಮೂಲಕ ಇಲ್ಲಿಗೆ ನೀರು ಸರಬರಾಜು ಮಾಡುತ್ತಿದ್ದಾರೆ.

ಲೆಕ್ಕವಿಟ್ಟು ನೀರಿನ ಖರ್ಚು

Advertisement

ಇದೀಗ ಎರಡು-ಮೂರು ದಿನಕ್ಕೊಮ್ಮೆ ಗ್ರಾ.ಪಂ. ನವರು ಟ್ಯಾಂಕರ್‌ ಮೂಲಕ ಇಲ್ಲಿಗೆ ನೀರು ಸರಬರಾಜು ಮಾಡುತ್ತಾರೆ. ಹೀಗಾಗಿ ದೊಡ್ಡ ಟ್ಯಾಂಕ್‌ಗಳ ಮೂಲಕ ನೀರನ್ನು ಸಂಗ್ರಹಿಸಿ ಬಳಸಿಕೊಳ್ಳಲಾಗುತ್ತದೆ. ನಿಯಮಿತ ಪ್ರಮಾಣದಲ್ಲಿ ನೀರು ನೀಡುವುದರಿಂದ ಲೆಕ್ಕವಿಟ್ಟು ನೀರು ಖರ್ಚು ಮಾಡಲಾಗುತ್ತದೆ.

ಪಂ.ನ ಇತರ ಭಾಗಗಳಲ್ಲೂ ಸಮಸ್ಯೆ

ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕೆದ್ಲಹಕ್ಲು, ಕಾಜ್ರಲ್ಲಿ, ಶಿರ್ಣಿ, ಎತ್ತಿನಟ್ಟಿ ಮುಂತಾದ ಕಡೆಗಳ ನೂರಾರು ಮನೆಗಳಿಗೆ ನೀರಿನ ಸಮಸ್ಯೆ ಇದ್ದು ಟ್ಯಾಂಕರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಜತೆಗೆ ಇನ್ನೂ ಹಲವು ಭಾಗದಿಂದ ಟ್ಯಾಂಕರ್‌ ನೀರಿಗೆ ಬೇಡಿಕೆ ಬರುತ್ತಿದೆ.

ಟ್ಯಾಂಕರ್‌ ನೀರಿಗೂ ಸಮಸ್ಯೆ?

ಗ್ರಾ.ಪಂ.ನವರು ಖಾಸಗಿ ಬಾವಿಯಿಂದ ನೀರನ್ನು ಪಡೆದು ಪೂರೈಕೆ ಮಾಡುತ್ತಿದ್ದಾರೆ. ಆದರೆ ಆ ಬಾವಿಗಳಲ್ಲೂ ನೀರಿನ ಪ್ರಮಾಣ ಕುಸಿಯುತ್ತಿದೆ ಜತೆಗೆ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹತ್ತು-ಹದಿನೈದು ದಿನ ಇದೇ ಪರಿಸ್ಥಿತಿ ಮುಂದುವರಿದರೆ ಟ್ಯಾಂಕರ್‌ ನೀರು ಸರಬರಾಜು ಕೂಡ ಕಷ್ಟವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ವಾರ್ಡ್‌ನವರ ಬೇಡಿಕೆ

••ಸರಕಾರಿ ಬಾವಿಯನ್ನು ಆದಷ್ಟು ಶೀಘ್ರ ದುರಸ್ತಿಗೊಳಿಸಬೇಕು.

• ಪ್ರತಿದಿನ ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡಬೇಕು.

••ಶಾಶ್ವತ ಪರಿಹಾರದ ಕುರಿತು ಚಿಂತನೆಯಾಗಬೇಕು.

• ಪಕ್ಕದ ಹೊಳೆಯಿಂದ ನೀರು ಶುದ್ಧೀಕರಿಸಿ ವಿತರಿಸುವ ಶಾಶ್ವತ ಯೋಜನೆ ಅಗತ್ಯ

ಅಗತ್ಯದಷ್ಟು ಟ್ಯಾಂಕರ್‌ ನೀರು

ನಮ್ಮಲ್ಲಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜಾಗುತ್ತಿದೆ. ಆದರೆ ಬೇಡಿಕೆಯ ಪ್ರಮಾಣದಲ್ಲಿ ಸಿಗುತ್ತಿಲ್ಲ. ಬಾವಿಯಲ್ಲಿ ಕೆಸರು ತುಂಬಿರುವುದು ಹಾಗೂ ಪಂಪ್‌, ಪೈಪ್‌ಲೈನ್‌ ಹಾಳಾಗಿರುವುದರಿಂದ ಸುಮಾರು 4 ತಿಂಗಳಿಂದ ನಳ್ಳಿ ನೀರು ಬರುತ್ತಿಲ್ಲ. ಇದನ್ನು ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರು ಕ್ರಮಕೈಗೊಂಡಿಲ್ಲ. ಈ ಕಾಮಗಾರಿ ನಡೆಸಿದಲ್ಲಿ ನೀರಿನ ಸಮಸ್ಯೆ ಬಹುತೇಕ ದೂರವಾಗಲಿದೆ.
-ಭಾಸ್ಕರ್‌ ಶೆಟ್ಟಿ ಗರಿಕೆಮಠ, ಸ್ಥಳೀಯ ನಿವಾಸಿ
ಗರಿಕೆಮಠ ಭಾಗದ ನಿವಾಸಿಗಳ ಬೇಡಿಕೆಗೆ ತಕ್ಕಂತೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ನೀರಿನ ಕೊರತೆ ಕುರಿತು ದೂರುಗಳು ಬಂದಿಲ್ಲ. ಸರಕಾರಿ ಬಾವಿ ಸ್ವಚ್ಛಗೊಳಿಸಲು ತಾಂತ್ರಿಕ ಸಮಸ್ಯೆಗಳಿದೆ. ಈ ಕುರಿತು ಪ್ರಯತ್ನ ಮಾಡಲಾಗುವುದು.
-ಆನಂದ ನಾಯ್ಕ, ಶಿರಿಯಾರ ಗ್ರಾ.ಪಂ. ಪಿ.ಡಿ.ಒ.
– ರಾಜೇಶ್ ಗಾಣಿಗ ಅಚ್ಲ್ಯಾಡಿ
Advertisement

Udayavani is now on Telegram. Click here to join our channel and stay updated with the latest news.

Next