ಶಿವಮೊಗ್ಗದ ಸೌರಭ ಮತ್ತು ಐಸಿರಿ ಭಕ್ತಿವಾಹಿನಿ ಆಯೋಜಿಸಿದ ರಾಜ್ಯ ಮಟ್ಟದ ” ನನ್ನ ಹಾಡು ….ದಾಸರ ಹಾಡು’ ದಾಸರ ಪದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ಕು| ಗಾರ್ಗಿ ಶಬರಾಯ ಅವರನ್ನು ರಾಗಧನ, ಉಡುಪಿ ವತಿಯಿಂದ ಮಾ.24ರಂದು ಎಮ್‌ಜಿಎಮ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಅಭಿನಂದಿಸ ಲಾಯಿತು.ಈ ಸಂದರ್ಭದಲ್ಲಿ ಗಾರ್ಗಿ ಸುಗಮ ಸಂಗೀತ ಕಛೇರಿ ನೀಡಿದರು. ಸಾಂಪ್ರದಾಯಿಕವಾದ ಕೇದಾರ ರಾಗದಲ್ಲಿ ರಂಗನಾಥನ ನೋಡುವ ಬನ್ನಿರೀ (ಶ್ರೀಪಾದ ರಾಯರ ರಚನೆ) ಪದದಿಂದ ಹಿತಮಿತವಾದ ಸ್ವರಕಲ್ಪನೆಗಳೊಂದಿಗೆ ಹಾಡುಗಾರಿಕೆ ಶುರುವಾಯಿತು. ಬೃಂದಾವನೀ ಸಾರಂಗದಲ್ಲಿ ಸದಾ ಎನ್ನ ಹೃದಯದಲ್ಲಿ (ವಿಜಯದಾಸರ ಕೀರ್ತನೆ) ಇಂಪಾಗಿ ಮೂಡಿ ಬಂದಿತು. ಬಳಿಕ ತೋಡಿ ರಾಗದ ಜೀವ ಸ್ವರಗಳ ಸಂಚಾರಗಳನ್ನು ಹರಹರವಾಗಿ ಬಿಡಿಸಿಟ್ಟ ಉಗಾಭೋಗದ ಮುಖೇನ ರಾಗಾಲಾಪನೆ, ಪುರಂದರ ದಾಸರ ತಾ ತಕಧಿಮಿತ ಭಕ್ತಿ ಗೀತೆಯ ಪ್ರಸ್ತುತಿ, ರಾಗಕ್ಕೆ ಮೆರುಗು ತರುವಂತಹ ಕಲ್ಪನಾ ಸ್ವರಗಳೊಂದಿಗೆ ನಡೆಯಿತು. ಅನಂತರ ದ್ವಿಜಾವಂತಿಯ ರಾಗಾಲಾಪನೆಯನ್ನು ಮಾಡಿದ ಕಲಾವಿದೆ ಹಾಡಿದ್ದು ಕುವೆಂಪು ಅವರ ಸೂತ್ರಧಾರಿಯು ನೀನು ಪಾತ್ರಧಾರಿಯು ನಾನು ಎನ್ನುವ ಕವನವನ್ನು.
ಇಲ್ಲಿ ಗಾಯಕಿಯು ಪದ್ಯದ ಅರ್ಥವನ್ನು ಶೃತಿ ಹಾಗೂ ಹಿಮ್ಮೇಳದೊಂದಿಗೆ ಮಾತಿನಲ್ಲಿ ವಿವರಿಸಿದಾಗ ಅದು ಬೇರೆಯೇ ತೆರನಾದ ಒಂದು ವಿಶೇಷವಾದ ಮಾಹೋಲ್‌ನ್ನು ಸೃಷ್ಟಿಸಿತು. ಖಂಡ ಛಾಪು ತಾಳದಲ್ಲಿ ಹಾಡಿದ ಈ ಪ್ರಸ್ತುತಿ ತುಂಬಾ ಪರಿಣಾಮಕಾರಿಯಾಗಿದ್ದು ಬಹಳ ಕಾಲ ಕೇಳುಗರ ಮನದಲ್ಲಿ ನಿಲ್ಲುವಂತದ್ದು. ಮುಂದೆ ದಾರಿಯ ತೋರೋ ಗೋಪಾಲ… ವಾದಿರಾಜರ ರಚನೆಯನ್ನು ವಿಭಿನ್ನವಾಗಿ ಹಾಡಿದರು.
ಅದೇನೆಂದರೆ ಬಿಲಹರಿ ಮತ್ತು ಚಂದ್ರಕೌಂಸ್ ಎರಡೂ ರಾಗಗಳಲ್ಲಿ ಹಾಡಿದ್ದು ಆದರೆ ಇದು ಮಾಮೂಲಿ ರಾಗ ಮಾಲಿಕಿಕೆಗಳಂತಿರದೆ ಪ್ರತಿ ಸಾಲುಗಳಗೆ ಎರಡೆರಡು ರಾಗಗಳನ್ನು ಬಳಸಿಕೊಂಡು ಹಾಡಲಾಯಿತು. ಒಂದೊಂದು ನಿಮಿಷಕ್ಕೂ ರಾಗಗಳನ್ನು ಬದಲಿಸಿಕೊಂಡು ಹಾಡಿದ ಈ ರಚನೆ ಗಾಯಕಿಗೆ ರಾಗಗಳ ಮೇಲಿರುವ ಹಿಡಿತವನ್ನು ತೋರಿಸುತ್ತಿತ್ತು. ಕೊನೆಯಲ್ಲಿ ಎನ್ನ ಪಾಲಿಸೋ ಕರುಣಾಕರ- ಸೋಹನಿ, ಗಿಳಿಯು ಪಂಜರದೊಳಿಲ್ಲ – ಹಿಂದುಸ್ಥಾನಿ ಜಂಜೂಟಿ, ಹೀರನ್ನ ಸಮಜ್ – ಕಬೀರ್ ದಾಸ್ ಭಜನ್‌ನೊಂದಿಗೆ ಹಾಡಿಗಾರಿಕೆ ಸಮಾಪನಗೊಂಡಿತು.
ಈ ಕಾರ್ಯಕ್ರಮವನ್ನು ಸುಗಮ ಸಂಗೀತ ಕಛೇರಿ ಎನ್ನುವುದು ಹೆಚ್ಚು ಸೂಕ್ತವಾದೀತು. ಏಕೆಂದರೆ ಶಾಸ್ತ್ರೀಯತೆಗೆ ಚ್ಯುತಿ ಬಾರದಂತೆ ಭಕ್ತಿ ಗೀತೆಗಳಿಗೆ ರಾಗ ವಿಸ್ತಾರ, ಸ್ವರ ಪ್ರಸ್ತಾರಗಳನ್ನು ಅಳವಡಿಸಿಕೊಂಡಿರುವುದು ಹಾಗೆಯೇ ಸುಗಮತೆಗೆ ಕುಂದು ಬಾರದಂತೆ ಸುಗಮ ಸಂಗೀತದ ಜಾಡಿನಲ್ಲಿಯೇ ಹಾಡಿರುವಂತದ್ದು.
ಒಟ್ಟಿನಲ್ಲಿ ಗಾರ್ಗಿ ಶಬರಾಯ ಸಂಗೀತ ಕಛೇರಿಯನ್ನು ನೀಡುವಾಗ ಅದು ಶಾಸ್ತ್ರೀಯತೆಯ ಚೌಕಟ್ಟಿನಲ್ಲಿಯೇ ಇರುತ್ತದೆ. ಅಂತೆಯೇ ಲಘು ಸಂಗೀತದ ಕಾರ್ಯಕ್ರಮದಲ್ಲಿ ಸುಗಮ ಸಂಗೀತಕ್ಕೆ ಬೇಕಾದಂತೆಯೇ ಇರುತ್ತದೆ. ಪಕ್ಕವಾದ್ಯದಲ್ಲಿ, ವೇಣುಗೋಪಾಲ್ ಶರ್ಮ, ವಯೊಲಿನ್‌ನಲ್ಲಿ ಸುಮುಖ ಕಾರಂತ, ಮೃದಂಗದಲ್ಲಿ ಮಾಧವ ಆಚಾರ್ಯಸಹಕರಿಸಿದರು.