ಬಳ್ಳಾರಿ: ತಾಲೂಕಿನ ಕರ್ನಾಟಕ-ಆಂಧ್ರ ಗಡಿಗ್ರಾಮ ಬೆಂಚ್‌ಕೊಟ್ಟಾಲ್‌ನಲ್ಲಿ ಶನಿವಾರ ಸಂಜೆ ಸುರಿದ ಬಿರುಗಾಳಿ, ಗುಡುಗು ಸಹಿತ ಸುರಿದ ಆಲಿಕಲ್ಲು ಮಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ತೋಟಗಾರಿಕೆ ಬೆಳೆ ನಷ್ಟವಾಗಿದ್ದು,
ಮೋಕಾ-ರೂಪನಗುಡಿ ಹೋಬಳಿಯ ಉಪ ತಹಶೀಲ್ದಾರ್ ವರಪ್ರಸಾದ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಧ್ಯಾಹ್ನ 3.30ಕ್ಕೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಅಧಿಕಾರಿ ರಾಜಶೇಖರ, ಸಂಜೀವರಾಯನ ಕೋಟೆ ಮತ್ತು ಎತ್ತಿನಬೂದಿಹಾಳ್ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶ್ರೀನಿವಾಸಲು ನೇತೃತ್ವದ ತಂಡ, ಮಳೆಗೆ ನಷ್ಟವಾಗಿದ್ದ ಬೆಳೆಯನ್ನು ಪರಿಶೀಲಿಸಿದರು. ಸುಮಾರು 70ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮಳೆಯಿಂದ ಹಾನಿಯುಂಟಾಗಿದ್ದ ಕಲ್ಲಂಗಡಿ, ಟಮೋಟಾ, ಮೆಣಸಿನಕಾಯಿ ಸಸಿ, ಕರಬೂಜಾ, ನವಿಲುಕೋಸ್ ಸಸಿ ಮಡಿ, ಕಟಾವು ಮಾಡಲಾಗಿದ್ದ ಈರುಳ್ಳಿ ಸೇರಿದಂತೆ ಇತರೆ ಬೆಳೆಗಳನ್ನು ಪರಿಶೀಲನೆ ನಡೆಸಿದರು.
ಮಳೆಯಿಂದ ನಷ್ಟಕ್ಕೊಳಗಾದ ರೈತರಾದ ಶ್ರೀನಿವಾಸ ಪ್ರಸಾದ, ಎ.ಚಂದ್ರಶೇಖರ, ರಮೇಶ, ಕೃಷ್ಣಾರೆಡ್ಡಿ, ಕೃಷ್ಣಮೂರ್ತಿ ಸೇರಿದಂತೆ ಇತರರು ಆಲೀಕಲ್ಲು ಮಳೆಯ ಆರಂಭವಾದ ಅನುಭವ ಕುರಿತು ಅವರೊಂದಿಗೆ ಹಂಚಿಕೊಂಡರು. ಶನಿವಾರ ಸಂಜೆ 5.45ರ ಸುಮಾರಿಗೆ ಬಿರುಗಾಳಿ, ಸಿಡಿಲು ಸಹಿತ ಆಲೀಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಅಧಿಕಾರಿಗಳಿಗೆ ತೋರಿಸಿದರು. ಕೇವಲ ಮುಕ್ಕಾಲು ತಾಸಿನೊಳಗೆ ಇಂಥಹ ಅನಾಹುತ ನಮಗೆ ಎದುರಾಗುತ್ತದೆ ಎಂಬ ನಿರೀಕ್ಷೆ ಮಾಡಿರಲಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ಶೇಡ್‌ನೆಟ್ ಮತ್ತು ಪಾಲಿಹೌಸ್ ಅನ್ನು ನಿರ್ಮಿಸಲಾಗಿತ್ತು. ಅದು ಕೂಡ ನೆಲಕ್ಕುರುಳಿವೆ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಪ್ರಕೃತಿ ವಿಕೋಪದಿಂದ ಉಂಟಾದ ಬೆಳೆನಷ್ಟ ಪರಿಹಾರದಡಿ ಲಕ್ಷಾಂತರ ರೂಪಾಯಿ ಮೌಲ್ಯದ ಪಾಲಿಹೌಸ್, ಶೇಡ್‌ನೆಟ್‌ನಲ್ಲಿ ಬೆಳೆಯಲಾದ ಬೆಳೆಗಳ ನಷ್ಟದ ಕುರಿತು ಅಂದಾಜು ವೆಚ್ಚದ ಬಾಬ್ತು ಅನ್ನು ತಯಾರಿಸಲು ಅಂಕಿ ಅಂಶಗಳನ್ನು ಕಲೆ ಹಾಕಿದರು.