Advertisement

ಅಕೇಶಿಯಾ ಬದಲು ಪುನರ್ಪುಳಿಗೆ ಮಣೆ

10:21 AM Oct 08, 2018 | |

ಮಂಗಳೂರು: ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಹಲವು ವರ್ಷಗಳಿಂದ ಆದ್ಯತೆ ಪಡೆದಿದ್ದ ಅಕೇಶಿಯಾಕ್ಕೆ ವಿದಾಯ ಹೇಳಿ ಬಹೂಪಯೋಗಿ ಪುನರ್ಪುಳಿ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ಅಡುಗೆ, ಪಾನೀಯ, ಔಷಧ ಮತ್ತು ಕೈಗಾರಿಕೆ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಮುರುಗಲ ಸಸ್ಯಪ್ರಭೇದವನ್ನು ಸಂರಕ್ಷಿಸಿ ಬೆಳೆಸುವತ್ತ ಮಹತ್ವದ ಹೆಜ್ಜೆ ಇರಿಸಿದೆ.

Advertisement

ಸಾಮಾಜಿಕ ಅರಣ್ಯ ಯೋಜನೆಯಲ್ಲಿ ದ. ಕ. ಜಿಲ್ಲೆಯಲ್ಲಿ ಈ ವರೆಗೆ 80 ಹೆಕ್ಟೇರ್ಪ್ರದೇಶದಲ್ಲಿ ಪುನರ್ಪುಳಿ ಗಿಡಗಳನ್ನು ಇಲಾಖೆ ನೆಟ್ಟಿದೆ.ರಸ್ತೆ ಬದಿಗಳಲ್ಲೂ ನೆಟ್ಟು ಬೆಳೆಸುವ ಯೋಜನೆಯಿದ್ದು, ಗುರುವಾಯನಕೆರೆ-
ನಾರಾವಿ ಹಾಗೂ ಮೂಡಬಿದಿರೆ ಭಾಗದಲ್ಲಿ ಈಗಾಗಲೇ 150 ಕಿ.ಮೀ. ರಸ್ತೆ ಬದಿಯಲ್ಲಿ ನೆಡಲಾಗಿದೆ. ಜೂನ್‌ ವೇಳೆಗೆ ಇನ್ನಷ್ಟು ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ಪುನರ್ಪುಳಿ ನೆಡುವ ಯೋಜನೆಯನ್ನು ಇಲಾಖೆ ಹಮ್ಮಿಕೊಂಡಿದೆ. ಪುನರ್ಪುಳಿ ಹಣ್ಣು ಮಾತ್ರವಲ್ಲದೆ ಸಿಪ್ಪೆಗೂ ಭಾರೀ ಬೇಡಿಕೆ ಇದ್ದು, ಅರಣ್ಯ ಇಲಾಖೆಗೆ ಆದಾಯವನ್ನೂ ತರಬಲ್ಲುದು.

 ಅಕೇಶಿಯಾ, ಗಾಳಿ ಬದಲು ಪುನರ್ಪುಳಿ
ಈ ಹಿಂದೆ ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಅಕೇಶಿಯಾ ಹಾಗೂ ಗಾಳಿಮರ ಆದ್ಯತೆಯ ಸ್ಥಾನ ಹೊಂದಿತ್ತು. ಆದರೆ ಅಕೇಶಿಯಾ ಭೂಮಿಯ ನೀರಿನಂಶ ಹಾಗೂ ಫಲವತ್ತತೆಯನ್ನು ನಾಶ ಮಾಡುತ್ತದೆ, ಅದನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದನ್ನು ಪರಿಗಣಿಸಿಯೂ ಸರಕಾರ ಅಕೇಶಿಯಾ ಗಿಡ ನೆಡುವುದಕ್ಕೆ ಉತ್ತೇಜನ ನೀಡದಿರಲು ನಿರ್ಧರಿಸಿತ್ತು. ಈಗ ಮಹಾಗನಿ, ಹಲಸು, ಹೆಬ್ಬಲಸುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ ದ. ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕವಾಗಿ ಬಹೂಪಯೋಗಿ ಸಸ್ಯಪ್ರಭೇದವಾಗಿರುವ ಪುನರ್ಪುಳಿಗೆ ವಿಶೇಷ ಆದ್ಯತೆ ನೀಡಲು ಇಲಾಖೆ ನಿರ್ಧರಿಸಿದೆ. 

ತೇಗಕ್ಕೆ ಬೇಡಿಕೆ ಕುಸಿತ
ಜಿಲ್ಲೆಯಲ್ಲಿ  ತೇಗ (ಸಾಗುವಾನಿ)ದ ಗಿಡಗಳಿಗೆ ಈಗ ಬೇಡಿಕೆ ಕುಸಿದಿದೆ. ಇದರಿಂದಾಗಿ ಸಾಮಾಜಿಕ ಅರಣ್ಯ ಯೋಜನೆಯಡಿ ಅರಣ್ಯ ಇಲಾಖೆಯ ವಿವಿಧ ಸರಕಾರಿ ನರ್ಸರಿಗಳಲ್ಲಿ ಬೆಳೆಸಿರುವ ಸುಮಾರು 40,000 ತೇಗದ ಗಿಡಗಳು ಮಾರಾಟವಾಗದೆ ಉಳಿದಿವೆ. ಮುಂದಿನ ದಿನಗಳಲ್ಲಿ ತೇಗ ಸಸಿಗಳ ಸಂಖ್ಯೆಯನ್ನೂ ಕಡಿತಗೊಳಿಸಲು ಇಲಾಖೆ ನಿರ್ಧರಿಸಿದೆ. 

ಕೃಷಿ ಅರಣ್ಯ ಯೋಜನೆ: ಗೇರು ಸಸಿಗಳು ಸರಕಾರದ ಕೃಷಿ ಅರಣ್ಯ ಯೋಜನೆಯಲ್ಲಿ ಈ ಬಾರಿ ಸಾಮಾಜಿಕ ಅರಣ್ಯ ಇಲಾಖೆಯು ಗೇರು ಗಿಡಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಜೂನ್‌ ವೇಳೆ ತಾಲೂಕಿಗೆ 5,000ರಂತೆ 5 ತಾಲೂಕುಗಳಲ್ಲಿ ಒಟ್ಟು 25,000 ಗಿಡಗಳನ್ನು ನೆಡಲು ನಿರ್ಧರಿಸಿದೆ ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಸಂಶೋಧನ ಕೇಂದ್ರಗಳಿಂದ ತಳಿಗಳನ್ನು ತರಿಸಲು ಕಾರ್ಯೋನ್ಮುಖವಾಗಿದೆ. ಕೃಷಿ ಅರಣ್ಯ ಯೋಜನೆಯಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ವಿಶೇಷ ಪ್ರೋತ್ಸಾಹ ಇದೆ.ಸಾಮಾಜಿಕ ಅರಣ್ಯ ಯೋಜನೆಯಡಿ ಗಿಡ ಪಡೆದು
ಬೆಳೆಸುವ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರಥಮ ಹಾಗೂ ದ್ವಿತೀಯ ವರ್ಷದಲ್ಲಿ 40 ರೂ. ಹಾಗೂ 3ನೇ
ವರ್ಷದಲ್ಲಿ 20 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಇತರರಿಗೆ ಈ ಯೋಜನೆ ಅನ್ವಯ ವಾಗುವುದಿಲ್ಲ. 

Advertisement

ಪುನರ್ಪುಳಿ
ಪುನರ್ಪುಳಿ, ಬಿರಿಂಡ, ಮುರುಗಲ, ಕೋಕಂ ಎಂದೆಲ್ಲ ಕರೆಯಲ್ಪಡುವ “ಗಾರ್ಸಿನಿಯಾ ಇಂಡಿಕಾ’ ಬಹೂಪಯೋಗಿ ಮರ. ಇದು ವಿಶ್ವದ ಅತಿ ಪ್ರಾಚೀನ 200 ಸಸ್ಯ ಪ್ರಭೇದಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟ ಅರಣ್ಯದ ಪ್ರಮುಖ ಸಸ್ಯಜಾತಿಗಳಲ್ಲಿ ಒಂದು.

ಸಾಮಾಜಿಕ ಅರಣ್ಯ ಯೋಜನೆಯಲ್ಲಿ ದ. ಕನ್ನಡ ಜಿಲ್ಲೆಯ ಗೋಮಾಳ, ಬಂಜರು ಭೂಮಿ ಸಹಿತ ಒಟ್ಟು 1,200 ಹೆಕ್ಟೇರ್‌ನಲ್ಲಿ ಗಿಡ ನೆಡಲಾಗಿದೆ. ಈಗ ಅಕೇಶಿಯಾ ಬದಲು ಪುನರ್ಪುಳಿ ಗಿಡಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ನೆಟ್ಟಿರುವ ಗಿಡಗಳು ಚೆನ್ನಾಗಿ ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ರಸ್ತೆ ಬದಿ ಹಾಗೂ ಇತರ ಬಂಜರು ಹಾಗೂ ಗೋಮಾಳ ಪ್ರದೇಶಗಳಲ್ಲಿ ಪುನರ್ಪುಳಿ ನೆಟ್ಟು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು.
-ಜೆ. ಶ್ರೀನಿವಾಸ ಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಇಲಾಖೆ, ಮಂಗಳೂರು

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next