Advertisement

ಕೆರೂರ ಬಸ್‌ ನಿಲ್ದಾಣದಲ್ಲಿ ಕಂಡಲೆಲ್ಲ ಕಸ

03:04 PM Nov 04, 2022 | Team Udayavani |

ಕೆರೂರ: ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರ ಮೇಲಿರುವ ಪಟ್ಟಣದ ಬಸ್‌ ನಿಲ್ದಾಣ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯ ಇಲ್ಲದಂತಾಗಿದೆ.

Advertisement

ಪಟ್ಟಣ ಸುಮಾರು 25 ಸಾವಿರ ಜನಸಂಖ್ಯೆ ಹೊಂದಿದೆ. ಸುತ್ತಲೂ ಸುಮಾರು 65 ಹಳ್ಳಿಗಳ ವ್ಯಾಪಾರ-ವ್ಯವಹಾರ, ದಿನಬಳಕೆ ವಸ್ತು ಖರೀದಿ ಕೇಂದ್ರವಾಗಿದೆ. ಶಾಲೆ-ಕಾಲೇಜುಗಳನ್ನು ಹೊಂದಿದ್ದು, ನಿತ್ಯವೂ ಸಾವಿರಾರು ಜನ ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಇನ್ನು ಪ್ರತಿ ಮಂಗಳವಾರ ನಡೆಯುವ ವಾರದ ಸಂತೆ ದಿನ ಬಸ್‌ ನಿಲ್ದಾಣ ಸಂಪೂರ್ಣ ಜನದಟ್ಟಣೆಯಿಂದ ಕೂಡಿರುತ್ತದೆ.

ಬೇರೆಡೆ ತೆರಳಲು, ಬೇರೆಡೆಯಿಂದ ಇಲ್ಲಿಗೆ ಬರುವ ಜನರಿಗೆ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು, ಮಹಿಳೆಯರ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಸುಸಜ್ಜಿತ ಆಸನ ವ್ಯವಸ್ಥೆ ಇಲ್ಲ. ಮಾಹಿತಿ ಫಲಕ ಸೇರಿದಂತೆ ಯಾವುದೊಂದು ಮೂಲಸೌಕರ್ಯ ಸಾರಿಗೆ ಸಂಸ್ಥೆ ಕಲ್ಪಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.

ನಿಲ್ದಾಣದ ತುಂಬಾ ಎಲ್ಲೆಂದರಲ್ಲಿ ಗುಟಕಾ ಚೀಟುಗಳನ್ನು, ಖಾಲಿ ನೀರಿನ ಬಾಟಲ್‌ ಗಳನ್ನು, ತಿಂಡಿ-ತಿನಿಸುಗಳ ಪಾಕೇಟ್‌ಗಳನ್ನು ಬೀಸಾಕಲಾಗಿದೆ.

ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗಕ್ಕೆ ಪಟ್ಟಣ ಹೊಂದಿಕೊಂಡಿರುವುದರಿಂದ ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ವಿಭಾಗದಿಂದ ಈ ಮಾರ್ಗದಲ್ಲಿ ದಿನನಿತ್ಯ ಹಲವಾರು ಬಸ್‌ಗಳು ಹಾಯ್ದು ಹೋಗುತ್ತವೆ. ಸ್ಥಳೀಯ ಬಸ್‌ಗಳಲ್ಲೂ ಸಾವಿರಾರು ಪ್ರಯಾಣಿಕರು ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಾರೆ. ನಿಲ್ದಾಣದಲ್ಲಿ ಸ್ವತ್ಛತೆ ಮರೀಚಿಕೆಯಾಗಿದೆ. ಮೂಲಸೌಕರ್ಯ ಕೊರತೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ.ಬಾಗಲಕೋಟೆಗೆ ತೆರಳುವ ಪ್ರಯಾಣಿಕರು ಬಸ್‌ ನಿಲ್ದಾಣದ ಮುಂಭಾಗ ಬಿಸಿಲಲ್ಲಿ ಗಂಟೆಗಟ್ಟಲೆ ಒಂಟಿಗಾಲಲ್ಲಿ ನಿಂತು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿ ಕೂರಲು ಆಸನ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ಪ್ರಯಾಣಿಕರ ಬೇಡಿಕೆಯಾಗಿದೆ.

Advertisement

ಕ್ಯಾಂಟೀನ್‌ ಬಲು ದುಬಾರಿ : ನಿಲ್ದಾಣದಲ್ಲಿರುವ ಕ್ಯಾಂಟೀನ್‌ ತಿಂಗಳಿಗೆ ಸುಮಾರು 60 ಸಾವಿರ ಬಾಡಿಗೆ ಕಟ್ಟುತ್ತಿದ್ದು, ಮಾಲೀಕರು ಅದರ ಹೊರೆಯನ್ನು ಗ್ರಾಹಕರ ಮೇಲೆ ಹೇರಿದ್ದಾರೆ. ಪರಿಣಾಮ ಜನ ಸೇವಿಸುವ ಉಪಾಹಾರಗಳ ದರ ಬಲು ದುಬಾರಿಯಾಗಿದೆ. ಶೌಚಾಲಯ ಬಳಕೆಯೂ ದುಬಾರಿಯಾಗಿದೆ. ಶೌಚಕ್ಕೆ 10 ರೂ, ಮೂತ್ರವಿಸರ್ಜನೆಗೆ 5 ರೂ. ದರ ನಿಗದಿ ಮಾಡಲಾಗಿದೆ. ಕುಡುಕರ ಹಾವಳಿ ನಿಲ್ದಾಣ ನಿಯಂತ್ರಕರಿಗೆ ತಲೆನೋವಾಗಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬಸ್‌ ನಿಲ್ದಾಣಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಶೌಚಾಲಯ ದುರ್ವಾಸನೆ: ನಿಲ್ದಾಣದಲ್ಲಿನ ಸಂಕೀರ್ಣಗಳ ಮದ್ಯದ ಮಳಿಗೆಯಲ್ಲಿ ಮಹಿಳೆ ಮತ್ತು ಪುರುಷರ ಶೌಚಾಲಯ ಇದ್ದು, ಸ್ವಚ್ಛತೆ ಇಲ್ಲದೇ ದುರ್ವಾಸನೆ ಹರಡಿದೆ. ಇದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ.

ಕೆರೂರ ಬಸ್‌ ನಿಲ್ದಾಣದ ಸಮಸ್ಯೆಗಳ ಕುರಿತು ಹಿರಿಯ ಅ ಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇರುವುದರಲ್ಲೇ ಸರಿ ಮಾಡಿಕೊಂಡು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ.  –ಎಂ.ಎಸ್‌. ಬುಳ್ಳಾ, ಬಿ.ಆರ್‌. ಕುಲಕರ್ಣಿ (ನಿಲ್ದಾಣ ನಿಯಂತ್ರಕರು).

ವೃದ್ಧರಿಗೆ ಮತ್ತು ಅಂಗವಿಕಲ ಪ್ರಯಾಣಿಕರಿಗೆ ಕೂರಲು ಸುರಕ್ಷಿತ ಆಸನ ವ್ಯವಸ್ಥೆಯಿಲ್ಲ. ಪ್ರಯಾಣಿಕರಿಗೆ ಯಾವುದೇ ಮೂಲಸೌಕರ್ಯ ಇಲ್ಲ. ಬಸ್‌ ನಿಲ್ದಾಣ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿದೆ.  –ರಮೇಶ ಕೊಣ್ಣೂರ (ಪ್ರಯಾಣಿಕ)

„ಶ್ರೀಧರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next