Advertisement

ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ಗೆ ಕಸ: ಪ್ರತಿಭಟನೆ

10:15 PM Oct 14, 2019 | mahesh |

ಸುಳ್ಯ/ಅರಂತೋಡು: ಸುಳ್ಯ ನಗರದ ಕಸ ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ಗೆ ತಂದು ಹಾಕುತ್ತಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಕಲ್ಚರ್ಪೆ (ಸಿರಿಕುರಲ್‌ ನಗರ) ಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ನಾಗೇಶ್‌ ಕುಂದಲ್ಪಾಡಿ, ಇಲ್ಲಿ ಕಸ ಹಾಕುವ ಪ್ರಸ್ತಾವ ಬಂದಾಗಲೇ ನಾವು ಹೋರಾಟ ನಡೆಸಿದ್ದೆವು. ನ್ಯಾಯಾಲಯದ ಮೆಟ್ಟಿಲೇರಿ ಪ್ರತಿಭಟಿಸಿದ್ದೆವು. ಆದರೆ ಆಗಿನ ಜಿಲ್ಲಾಧಿಕಾರಿ ಅವರು ಆಧುನಿಕ ತಂತ್ರಜ್ಞಾನ ಬಳಸಿ ತ್ಯಾಜ್ಯ ಮರು ಬಳಕೆಗೆ ವ್ಯವಸ್ಥೆ ಮಾಡುವುದಾಗಿ ನ್ಯಾಯಾಲಯದ ಮುಂದೆ ಹೇಳಿದ ಕಾರಣ ನ್ಯಾಯಾಲಯದಲ್ಲಿ ಅವರಿಗೆ ಜಯ ಸಿಕ್ಕಿತ್ತು. ಆದರೆ ಡಿ.ಸಿ. ಅವರು ಈ ತನಕವೂ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇ ಮಾಡಿಲ್ಲ ಎಂದವರು ಆಪಾದಿಸಿದರು.

ನಾವು ಮನುಷ್ಯರಲ್ಲವೇ?
ಅಶೋಕ್‌ ಪೀಚೆ ಮಾತನಾಡಿ, ನಗರದ ಕಸಕ್ಕೆ ದುಗಲಡ್ಕದಲ್ಲಿ ಜಾಗ ಗೊತ್ತು ಮಾಡಿದ ಸಂದರ್ಭ ಸ್ಥಳೀಯ ನಿವಾಸಿಗಳ ಒತ್ತಡಕ್ಕೆ ಮಣಿದ ನ.ಪಂ. ಈಗ ಮತ್ತೆ ಇಲ್ಲಿಗೆ ಕಸ ಹಾಕುತ್ತಿದೆ. ಇದರ ಮಧ್ಯೆ ಅಜ್ಜಾವರದಲ್ಲಿಯೂ ಸ್ಥಳ ಗುರುತಿಸಿದ್ದರೂ ಅಲ್ಲಿಯೂ ವಿರೋಧ ಕಂಡು ಬಂತು. ನ.ಪಂ. ಅಧಿಕಾರಿಗಳಿಗೆ ಆ ಪ್ರದೇಶದ ಜನರು ಮಾತ್ರ ಮನುಷ್ಯರಂತೆ ಕಾಣುತ್ತಾರೆ. ಕಲ್ಚಪೆìಯವರು ಮನುಷ್ಯರಲ್ಲವೇ? ನಮ್ಮ ಬೇಡಿಕೆಯಂತೆ ಇಲ್ಲಿ ಕಸ ಹಾಕಬಾರದು ಎಂದು ಎಚ್ಚರಿಸಿದರು.

ನ.ಪಂ. ಮಾಜಿ ಸದಸ್ಯ ಕೆ. ಗೋಕುಲ್‌ದಾಸ್‌ ಮಾತನಾಡಿ, ನಾನು ನ.ಪಂ. ಸದಸ್ಯನಾಗಿದ್ದ ಸಂದರ್ಭ ಕಲ್ಚರ್ಪೆಗೆ ಕಸ ಹಾಕಬಾರದೆಂದು ಧ್ವನಿ ಎತ್ತಿದ್ದೆ. ಬದಲಿ ಜಾಗದ ವ್ಯವಸ್ಥೆಯ ಬಗ್ಗೆಯೂ ಸಲಹೆ ನೀಡಿದಾಗ ಅಧಿಕಾರಿಗಳು ಮಾಧ್ಯಮದವರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಆ ಊರಿನ ಜನರು ವಿರೋಧ ವ್ಯಕ್ತಪಡಿಸಿದರು. ಒಂದು ವರ್ಷದಿಂದ ಈ ಪ್ರದೇಶಕ್ಕೆ ಕಸ ಪೂರೈಕೆ ಸ್ಥಗಿತವಾಗಿತ್ತು. ಈಗ ಪುನರಾರಂಭವಾಗಿದೆ.

ನ.ಪಂ. ಆವರಣ ಡಂಪಿಂಗ್‌ ಕೇಂದ್ರ
ನ.ಪಂ. ವತಿಯಿಂದ ತ್ಯಾಜ್ಯ ವಿಲೇಗೆಂದು ನಿರ್ಮಿಸಿದ ಕಲ್ಚರ್ಪೆ ತ್ಯಾಜ್ಯ ವಿಲೇ ಘಟಕ ತುಂಬಿ ತುಳುಕಿದ್ದು, ಕೆಲವು ತಿಂಗಳ ಹಿಂದೆ ಅಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪೂರೈಕೆ ಸ್ಥಗಿತಗೊಳಿಸಲಾಯಿತು. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ತನಕ ನಗರದ ಕಸವನ್ನು ನ.ಪಂ. ಮುಂಭಾಗದ ಆವರಣದಲ್ಲಿ ರಾಶಿ ಹಾಕಿ ಹಸಿ ಕಸ, ಒಣ ಕಸ, ಪ್ಲಾಸ್ಟಿಕ್‌ ರಾಶಿ ಹಾಕಿ ಪ್ರತ್ಯೇಕಿಸಿ ಹಸಿ ಕಸವನ್ನು ಸಮೀಪದ ತೋಟದಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವುದು ಹಾಗೂ ಪ್ಲಾಸ್ಟಿಕ್‌ ಇನ್ನಿತರ ಪರಿಕರವನ್ನು ನ.ಪಂ. ಗೋಡೌನ್‌ನಲ್ಲಿ ಸಂಗ್ರಹಿಸಿ ಬಳಿಕ ಅದನ್ನು ಬೇರೆಡೆ ವಿಲೇಗೆ ಮಾಡಲು ನಿರ್ಧರಿಸಲಾಯಿತು. ಈ ಪ್ರಕ್ರಿಯೆಗೆ ವರ್ಷ ಸಮೀಪಿಸುತ್ತಿದ್ದರೂ, ಶಾಶ್ವತ ಪರಿಹಾರದ ಪ್ರಯತ್ನ ಇನ್ನೂ ಕಾರ್ಯಗತಗೊಂಡಿಲ್ಲ.

Advertisement

ಕಸ ಕಸಿವಿಸಿ
ನಗರದಿಂದ ಎಂಟು ಕಿ.ಮೀ. ದೂರದ ಕಲ್ಚರ್ಪೆ ತ್ಯಾಜ್ಯ ಘಟಕಕ್ಕೆ ದಿನಂಪ್ರತಿ 5ರಿಂದ 6 ಟನ್‌ ಕಸ ಕೊಂಡೊಯ್ಯಲಾಗುತ್ತಿತ್ತು. ಮನೆ-ಮನೆ ಸಂಗ್ರಹದಲ್ಲಿ ಹಸಿ, ಒಣ ಕಸ, ಪ್ಲಾಸ್ಟಿಕ್‌ ಅನ್ನು ಪ್ರತ್ಯೇಕಿಸದೆ ಗೋಣಿಯೊಳಗೆ ತುಂಬಿ ಡಂಪಿಂಗ್‌ ಯಾರ್ಡ್‌ನಲ್ಲಿ ರಾಶಿ ಹಾಕಿದ ಪರಿಣಾಮ ಅಲ್ಲಿ ಈಗ ಶೇ. 90ಕ್ಕೂ ಅಧಿಕ ಪ್ಲಾಸ್ಟಿಕ್‌, ಒಣ ಕಸವೇ ತುಂಬಿದೆ. ಜತೆಗೆ ಹಸಿ ಕಸ ಪ್ರತ್ಯೇಕಿಸದೆ, ಸಾವಯವ ಗೊಬ್ಬರ ತಯಾರಿ ಕಾರ್ಯವೂ ಆಗುತ್ತಿಲ್ಲ. ಪರಿಣಾಮ ಮಳೆಗಾಲದಲ್ಲಿ ತ್ಯಾಜ್ಯದ ದುರ್ವಾಸನೆ ಊರಿಡೀ ಹಬ್ಬುತ್ತದೆ. ವರ್ಷಂಪ್ರತಿ ಮಲಿನ ನೀರು ಪಯಸ್ವಿನಿ ಸೇರಿ ರೋಗ ಭೀತಿ ಉಂಟು ಮಾಡುತ್ತಲಿದೆ. ಇದು ನ.ಪಂ. ಸಾಮಾನ್ಯ ಸಭೆ ಸೇರಿದಂತೆ ತಾಲೂಕು ಮಟ್ಟದ ಸಭೆಗಳಲ್ಲಿ ಕೂಡ ಚರ್ಚಾ ವಸ್ತುವಾಗಿತ್ತು. ಕಲ್ಚಪೆì ಘಟಕದ ಬಗ್ಗೆ ಆಲೆಟ್ಟಿ ಗ್ರಾ.ಪಂ.ನಲ್ಲಿಯೂ ಆಕ್ರೋಶಗಳು ಕೇಳಿ ಬಂದಿತ್ತು.

ಶೆಡ್‌ನ‌ಲ್ಲೇ ಉಳಿದ ಕಸ
ಹಲವು ತಿಂಗಳಿನಿಂದ ಮನೆ-ಮನೆ, ಕಟ್ಟಡಗಳಿಂದ ಸಂಗ್ರಹಿಸಿದ ಕಸ, ತ್ಯಾಜ್ಯವನ್ನು ನ.ಪಂ. ಮುಂಭಾಗದ ಶೆಡ್‌ಗೆ ತಂದು ಹಾಕಲಾಗುತ್ತಿದೆ. ಅಲ್ಲಿ ಪೌರ ಕಾರ್ಮಿಕರು ಹಸಿ ಹಾಗೂ ಒಣ ಕಸ ಪ್ರತ್ಯೇಕಗೊಳಿಸುತ್ತಾರೆ. ಹೀಗೆ ಪ್ರತ್ಯೇಕಗೊಂಡ ಹಸಿ ಕಸವನ್ನು ವಿನೋದ್‌ ಲಸ್ರಾದೋ ಅವರು ತನ್ನ ತೋಟಕ್ಕೆ ಒಯ್ದು ಅಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತಿದ್ದರು. ಉಳಿದ ಒಣ ಕಸ, ಪ್ಲಾಸ್ಟಿಕ್‌ ವಸ್ತುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಲಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಹಸಿ ಕಸವನ್ನು ತೋಟಕ್ಕೆ ಒಯ್ಯುವ ಪ್ರಕ್ರಿಯೆಗೆ ಕೆಲವರ ವಿರೋಧ ಬಂದ ಕಾರಣ ಈಗ ಹಸಿ ಕಸವು ನ.ಪಂ. ಆವರಣದಲ್ಲೇ ಬಿದ್ದಿದೆ. ಇದರಿಂದ ಆಸುಪಾಸಿನಲ್ಲಿ ದುರ್ನಾತ ಬೀರಿದೆ.

ಕಲ್ಚರ್ಪೆಗೆ ಕಸ: ವಿರೋಧ
ಹಸಿ ಕಸವನ್ನು ನ.ಪಂ. ಆವರಣದಲ್ಲಿ ಸಂಗ್ರಹ ಅಸಾಧ್ಯವಾದ ಹಿನ್ನೆಲೆಯಲ್ಲಿ ಮತ್ತೆ ಕಲ್ಚರ್ಪೆಗೆ ಕಸ ಸಾಗಿಸಲು ನ.ಪಂ. ಮುಂದಾಗಿದೆ. ಆದರೆ ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆ ಕೂಡ ನಡೆದಿದೆ.

ವಿಲೇಗೆ ಪ್ರಯತ್ನ
ಕಲ್ಚರ್ಪೆ ಡಂಪಿಂಗ್‌ ಯಾರ್ಡ್‌ಗೆ ಹಸಿ ಕಸ ಮಾತ್ರ ವಿಲೇ ಮಾಡಿ, ಉಳಿದ ತ್ಯಾಜ್ಯಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಲಾಗುವುದು. ಎರಡು ಕಡೆ ಸ್ಥಳ ನೋಡಿದ್ದು, ಅಲ್ಲಿಗೆ ನ.ಪಂ. ಆವರಣದ ಕಸವನ್ನು ಕೊಂಡೊಯ್ದು ವಿಲೇ ಮಾಡಲಾಗುವುದು.
– ಮತ್ತಡಿ, ಮುಖ್ಯಾಧಿಕಾರಿ, ನ.ಪಂ.

Advertisement

Udayavani is now on Telegram. Click here to join our channel and stay updated with the latest news.

Next