Advertisement

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆತ

05:55 AM May 25, 2018 | Team Udayavani |

ಬಂಟ್ವಾಳ: ಬಿ.ಸಿ. ರೋಡ್‌ ಸುತ್ತಮುತ್ತ ವಾಹನಗಳಲ್ಲಿ ಕಸವನ್ನು ತಂದು ಎಸೆಯುತ್ತಿದ್ದ ಎಂಟು ಮಂದಿಯ ವಾಹನ ಸಹಿತ ವ್ಯಕ್ತಿಗಳನ್ನು ಪುರಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ವತಃ ಮುಖ್ಯಾಧಿಕಾರಿ ರಾಯಪ್ಪ ಅವರೇ ರೆಡ್‌ ಹ್ಯಾಂಡ್‌ ಹಿಡಿದು, ಅವರಿಗೆ ಎಚ್ಚರಿಖೆ ನೀಡಿ ಬಿಟ್ಟಿರುವ ಘಟನೆ ಮೇ 24ರಂದು ಸಂಭವಿಸಿದೆ. ಮುಖ್ಯಾಧಿಕಾರಿ ಬೆಳಗ್ಗೆ 7ರಿಂದ 10ರ ತನಕ ಸ್ಥಳದಲ್ಲಿ ಇದ್ದು, ಕಸವನ್ನು ವಾಹನದಲ್ಲಿ ತಂದು ಎಸೆಯುವವರ ವಾಹನ ಸಹಿತ ಫೋಟೋ ತೆಗೆದುಕೊಂಡು ಅವರಿಗೆ ಎಚ್ಚರಿಕೆ ನೀಡಿಬಿಟ್ಟರು. ಕೇವಲ 2 ಗಂಟೆ ಅವಧಿಯಲ್ಲಿ ಒಂದು ಲಾರಿ, ಒಂದು ಕಾರು, ಐದು ದ್ವಿಚಕ್ರ, ಒಂದು ಟೆಂಪೋದಲ್ಲಿ ಕಸವನ್ನು ತುಂಬಿಸಿ ತಂದು ರಸ್ತೆ ಬದಿ ಸುರಿಯುತ್ತಿದ್ದ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Advertisement

ಕೊಲೆ ಮಾಡಿದ್ದೇವೆಯೇ?
ಕಸವನ್ನು ತಂದು ಹಾಕಿದಕ್ಕೂ ನಮ್ಮ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದೇ? ಕೊಲೆ ಮಾಡಿದ್ದೇವೆಯೇ ? ನಾವೇನು ತಪ್ಪು ಮಾಡಿದ್ದು, ಎಲ್ಲರೂ ತಂದು ಹಾಕುತ್ತಾರೆ ಎನ್ನುವ ಮಾತನ್ನು ಒಂದೆರಡು ದ್ವಿಚಕ್ರ ವಾಹನ ಸವಾರರು ಪುರಸಭೆಯ ಮುಖ್ಯಾಧಿಕಾರಿಗೆ ಪ್ರಶ್ನಿಸಿದರು. ಕಸ ತಂದು ರಸ್ತೆ ಬದಿಹಾಕುವುದು ಅಪರಾಧ. ನೀವು ಗಮನಕ್ಕೆ ಬಂದಿದ್ದೀರಿ. ನಿಮ್ಮ ವಾಹನದ ಸಂಖ್ಯೆ ನೋಂದಾಯಿಸಿ ಇಟ್ಟುಕೊಂಡಿದ್ದೇವೆ. ಮುಂದಕ್ಕೆ ನಿಮ್ಮಿಂದ ಇದೇ ಕ್ರಮ ಆದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರವಿರಲಿ ಎಂದು ಸೂಚಿಸಿದರು.

ಸಿಸಿ ಕೆಮರಾ ವ್ಯವಸ್ಥೆ
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವರ ವಿರುದ್ಧ ಸಮಾನ ಮನಸ್ಕರೊಂದಿಗೆ ಸೇರಿ ಬಿ.ಸಿ. ರೋಡ್‌ನ‌ ಸ್ವರ್ಣೋದ್ಯಮಿ ಒಬ್ಬರು ಲಯನ್ಸ್‌ ಸಂಸ್ಥೆಯೊಂದಿಗೆ ನಡೆಸಿದ ಪ್ರಯತ್ನದಿಂದ ಬಿ.ಸಿ. ರೋಡ್‌ ಸಾರ್ವಜನಿಕ ಬಸ್‌ನಿಲ್ದಾಣ ಹಿಂಬದಿ ತ್ಯಾಜ್ಯ ಎಸೆಯುವ ಸಮಸ್ಯೆಯನ್ನು ಬಗೆಹರಿಸಿದ್ದನ್ನು ಸ್ಮರಿಸಿಕೊಳ್ಳಬೇಕು. ಕಸವನ್ನು ಬಿ.ಸಿ. ರೋಡ್‌ ಸರ್ವಿಸ್‌ ಬಸ್‌ ನಿಲ್ದಾಣದ ಹಿಂಬದಿ ಎಸೆಯುತ್ತಿದ್ದ ಮಂದಿ ಸಿಸಿ ಕೆಮರಾದಲ್ಲಿ ತಮ್ಮ ಮುಖ ಪರಿಚಯ ಸಿಗುವುದು ಎಂದು ಖಾತ್ರಿ ಆಗುತ್ತಲೆ ಅಲ್ಲಿಗೆ ಬರುವುದನ್ನು ನಿಲ್ಲಿಸಿದ್ದರು.

ಎರಡು ವರ್ಷಗಳ ಹಿಂದೆಯೇ ನಿರ್ಣಯ
ಪುರಸಭೆಯೂ ಇದೇ ರೀತಿಯಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ಸಾಧ್ಯ ಎನ್ನುವುದನ್ನು 2 ವರ್ಷಗಳ ಹಿಂದೆಯೇ ಪುರಸಭೆಯ ಸಭೆಯಲ್ಲಿ ನಿರ್ಣಯವಾಗಿತ್ತು. ಆದರೆ ಅದನ್ನು ಅಳವಡಿಸುವಲ್ಲಿ ಮಾತ್ರ ಸಾಕಷ್ಟು ಕ್ರಮಗಳು ಆಗಿಲ್ಲ.

ವಾರದ ಹಿಂದೆ ಎಚ್ಚರಿಕೆ
ಪುರಸಭಾ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಎಚ್ಚರಿಕೆ ನೀಡಿದ್ದರು. ಈ ಕುರಿತು ಪ್ರಕಟನೆ ನೀಡಿರುವ ಅವರು ತ್ಯಾಜ್ಯ ವಿಲೇವಾರಿಯ ವಾಹನಗಳು ನಿಮ್ಮ ಮನೆಯ ಕಸವನ್ನು ಸಂಗ್ರಹಿಸಲು ಬರುತ್ತವೆ. ಬಾರದೇ ಇದ್ದರೆ ಪುರಸಭೆಯನ್ನು ಸಂಪರ್ಕಿಸಬೇಕು. ಅದಕ್ಕೆ ಹೊರತಾಗಿ ತ್ಯಾಜ್ಯವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುವಂತಿಲ್ಲ ಎಂದು ನೋಟಿಸು ಪ್ರಕಟನೆಯನ್ನು ಹಾಕಿಸಿದ್ದರು.

Advertisement

ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಟೇಲ್‌, ಗೂಡಂಗಡಿ, ಫಾಸ್ಟ್‌ಫುಡ್‌ ವ್ಯಾಪಾರಸ್ಥರು ತಮ್ಮಲ್ಲಿನ ತ್ಯಾಜ್ಯ ವಸ್ತುಗಳನ್ನು ಗಾಣದಪಡ್ಪು ಸ್ಥಳದಲ್ಲಿ ಕಸವನ್ನು ತಂದು ಹಾಕುತ್ತಿರುವವರ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಂಡು ದಂಡನೆ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಈ ಎಚ್ಚರಿಕೆ, ನೋಟಿಸು ಯಾವುದಕ್ಕೂ ಕ್ಯಾರೇ ಎನ್ನದ ಜನತೆಗೆ ಸ್ಪಷ್ಟ ಸಂದೇಶ ನೀಡುವ ಸಲುವಾಗಿ ಕಾರ್ಯಾಚರಣೆ ಆರಂಭಿಸಿದ್ದರು.

ಕಠಿನ ಕ್ರಮ
ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಮೇಲೆ ಮುಂದಕ್ಕೆ ಕಠಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ನಿಮ್ಮಲ್ಲಿಗೆ ಪುರಸಭೆಯ ವಾಹನ ಬಂದು ಕಸವನ್ನು ಸಂಗ್ರಹಿಸುವುದು. ರಸ್ತೆ ಬದಿ ಕಸ ಎಸೆಯುವವರನ್ನು ಹೊರ ಪ್ರದೇಶದ ವ್ಯಕ್ತಿಗಳು ಎಂದು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು.
– ರಾಯಪ್ಪ ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next