ಮುಳ್ಳೇರಿಯ: ಸಿಪಿಎಂ ನಿಯಂತ್ರಣದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫ್ರ್ ಕೋ-ಆಪರೇಟಿವ್ ಸೊಸೈಟಿಯಿಂದ 4.76 ಕೋಟಿ ರೂ. ವಂಚನೆ ನಡೆಸಿದ ಪ್ರಕರಣದಲ್ಲಿ ಕಾರ್ಯದರ್ಶಿ ಕೆ. ರತೀಶ್ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಠೇವಣಿ ಹೂಡಿರುವುದಾಗಿ ತಿಳಿದು ಬಂದಿದೆ.
ವಂಚನೆಗೈದ ಹಣವನ್ನು ವಯನಾಡು ಹಾಗೂ ಬೆಂಗಳೂರಿನಲ್ಲಿ ರತೀಶ್ ಠೇವಣಿ ಹೂಡಿದ್ದಾನೆಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ವಯನಾಡು ಹಾಗೂ ಬೆಂಗಳೂರಿನಲ್ಲಿ ಭೂಮಿ ಖರೀದಿಸಿರುವುದಾಗಿಯೂ ಹೇಳಲಾಗುತ್ತಿದೆ. ಈ ಕುರಿತಾದ ದಾಖಲೆಗಳು ಪೊಲೀಸರಿಗೆ ಲಭಿಸಿವೆ.
ಇದೇ ವೇಳೆ ಕೋಟ್ಯಂತರ ರೂ. ವಂಚಿಸಿದರೂ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಉಂಟಾಗದಿರುವುದರಿಂದ ಸಂಶಯ ಹುಟ್ಟಿಕೊಳ್ಳಲಿಲ್ಲ. ಸಿಪಿಎಂ ಮುಳ್ಳೇರಿಯ ಲೋಕಲ್ ಕಮಿಟಿ ಸದಸ್ಯ ರತೀಶ್ ವಂಚನೆ ಪಕ್ಷಕ್ಕೂ ತಿಳಿದಿರಲಿಲ್ಲವೆನ್ನಲಾಗಿದೆ. ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಚಿನ್ನದ ಮೇಲೆ ಸಾಲ ತೆಗೆದು ಅಪೆಕ್ಸ್ ಬ್ಯಾಂಕ್ ಸೊಸೈಟಿಗೆ ನೀಡಿದ ಹಣವನ್ನು ಕೈವಶವಿರಿಸಿಕೊಂಡು ವಂಚನೆ ಮಾಡಲಾಗಿದೆ.
ರತೀಶ್ ವಿರುದ್ಧ ಜಾಮೀನು ರಹಿತ ಕೇಸುಗಳನ್ನು ಆದೂರು ಪೊಲೀಸರು ದಾಖಲಿಸಿದ್ದಾರೆ. ರತೀಶ್‌ನನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ. ಆರೋಪಿ ಹಾಸನದಲ್ಲಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ದಾಖಲೆಪತ್ರ ಸಾಗಿಸಿದ ದೃಶ್ಯ ಪತ್ತೆ
ಸೊಸೈಟಿಯ ಭದ್ರತಾ ಕೊಠಡಿಯಲ್ಲಿರಿಸಿದ್ದ ಚಿನ್ನಾಭರಣ ಹಾಗೂ ದಾಖಲೆಪತ್ರಗಳನ್ನು ಕಾರ್ಯದರ್ಶಿ ರತೀಶ್ ಕೊಂಡೊಯ್ದಿರುವುದಾಗಿ ಸೂಚನೆಯಿದೆ. ಸೊಸೈಟಿಯ ಸಿಸಿಟಿವಿ ಕೆಮರಾ ಪರಿಶೀಲಿಸಿದಾಗ ಚಿನ್ನಾಭರಣ ಸಾಗಿಸುವ ದೃಶ್ಯಗಳು ಕಂಡು ಬಂದಿವೆ.