Advertisement

ಕಸ ಸಂಗ್ರಹಣೆ: ಆಗಿಲ್ಲ ಅವ್ಯವಹಾರ

11:00 AM Feb 07, 2019 | Team Udayavani |

ಚಿಕ್ಕಮಗಳೂರು: ನಗರದ ಕಸ ಸಂಗ್ರಹಣೆಗೆ ಗುತ್ತಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್‌ ಸ್ಪಷ್ಟಪಡಿಸಿದರು.

Advertisement

ಬುಧವಾರ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್‌ ಅವರು ನಗರಸಭೆ ಕಸ ಸಂಗ್ರಣೆಗೆ ಟೆಂಡರ್‌ ಕರೆಯದೆ ಗುತ್ತಿಗೆ ನೀಡಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದ್ದು, ಕಸ ಸಂಗ್ರಹಣೆಗೆ ಸಂಘ ಸಂಸ್ಥೆ, ಖಾಸಗಿ ಅವರು ಮುಂದೆ ಬಂದರೆ ಗುತ್ತಿಗೆ ನೀಡಲು ಕಾನೂನಿನಲ್ಲೇ ಅವಕಾಶವಿದೆ ಎಂದರು.

ಈ ಹಿಂದೆ ಸ್ವಚ್ಛ ಟ್ರಸ್ಟ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರೇಣುಕಾಂಬಾ ಸ್ವ-ಸಹಾಯ ಸಂಘಕ್ಕೆ ವಹಿಸಲಾಗಿತ್ತು. ಅವರು ಮನೆ ಮನೆ ಕಸ ಸಂಗ್ರಹಿಸಿ ಮಾಸಿಕ 30 ರೂ. ಪಡೆಯುತ್ತಿದ್ದರು. ಆದರೆ ಖರ್ಚು ಹೆಚ್ಚಾದ ಕಾರಣದಿಂದ ಕಸ ಸಂಗ್ರಹಣೆಗೆ ಸಂಸ್ಥೆಗಳು ಹಿಂದೆ ಸರಿದವು ಎಂದು ತಿಳಿಸಿದರು.

ಸ್ವಯಂ ಪ್ರೇರಿತವಾಗಿ ಮುಂದೆ ಬಂದ ತುಮಕೂರು ಮೂಲದ ಎಸ್‌ಎಂಪಿ ಎಂಟರ್‌ಫ್ತೈಸಸ್‌ ಅವರಿಗೆ ವಹಿಸಿಕೊಡಲಾಯಿತು. ನಗರ ಸಭೆಯಿಂದ ಎಂಟರ್‌ಫ್ತೈಸಸ್‌ಗೆ ನಯಾಪೈಸೆ ನೀಡುತ್ತಿಲ್ಲ, 30 ಆಟೋ ಟಿಪ್ಪರ್‌, 80 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಎಸ್‌ಎಂಪಿ ಎಂಟರ್‌ಫ್ತೈಸಸ್‌ ಕಸ ಸಂಗ್ರಹಣೆ ಜವಾಬ್ದಾರಿ ವಹಿಸಿಕೊಂಡ ನಂತರ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಪ್ರಶಂಸೆಗೆ ಒಳಗಾಗಿದೆ ಎಂದರು.

ಎಸ್‌ಎಂಪಿ ಎಂಟರ್‌ಫ್ತೈಸಸ್‌ ಅವರೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು, ಹಿಂದಿನ ಶುಲ್ಕವನ್ನೇ ಪಡೆಯುತ್ತಿದ್ದಾರೆ. ಮಾಸಿಕ 10ಲಕ್ಷದ 64 ಸಾವಿರ ರೂ. ಸಂಗ್ರಹಣೆ ಮಾಡಲಾಗುತ್ತಿದೆ. ಮಾಸಿಕ 13ಲಕ್ಷದ 45 ಸಾವಿರ ರೂ. ಖರ್ಚಾಗುತ್ತಿದೆ. ಆದರೂ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ನಗರದಲ್ಲಿ 30,370 ಮನೆಗಳಿದ್ದು, 19,880 ಮನೆಗಳಿಂದ ಮಾತ್ರ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಮನೆಗಳ ಶುಲ್ಕವನ್ನು ಸಂಗ್ರಹಿಸುವ ಜವಾಬ್ದಾರಿ ಅವರಿಗೆ ನೀಡಲಾಗಿದೆ. ಶುಲ್ಕ ಸಂಗ್ರಹಣೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಸ್‌ಎಂಪಿ ಎಂಟರ್‌ಫ್ತೈಸಸ್‌ ಆಗುತ್ತಿರುವ ನಷ್ಟವೂ ಸರಿದೂಗಲಿದೆ. ಕಸ ಸಂಗ್ರಹಣೆಗೆ ನಗರಸಭೆಯಿಂದ ಸಂಪೂರ್ಣ ಜವಾಬ್ದಾರಿ ಎಸ್‌ಎಂಪಿ ಎಂಟರ್‌ಫ್ತೈಸಸ್‌ ಅವರದ್ದು ಆಗಿದೆ. ಎಚ್.ಎಚ್.ದೇವರಾಜ್‌ ಆರೋಪ ಮಾಡಿದ್ದಂತೆ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ನಗರಸಭೆ ಸದಸ್ಯ ರಾಜಶೇಖರ್‌ ಮಾತನಾಡಿ, ಎಸ್‌ಎಂಪಿ ಎಂಟರ್‌ಫ್ತೈಸಸ್‌ ಅವರು ಈಗಾಗಲೇ ತುಮಕೂರು, ವಿಜಯಪುರ ಜಿಲ್ಲೆಗಳಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಉತ್ತಮವಾಗಿ ಕಸ ಸಂಗ್ರಹಣೆ ಮಾಡುತ್ತಿರುವುದನ್ನು ಗಮನಿಸಿ ಹಾಸನ ಜಿಲ್ಲೆಯಲ್ಲಿಯೂ ಎಸ್‌ಎಂಪಿ ಎಂಟರ್‌ಫ್ತೈಸಸ್‌ಗೆ ನೀಡಲು ಮುಂದಾಗಿದೆ. ಕಸದ ನಿರ್ವಹಣೆ ಜವಾಬ್ದಾರಿಯನ್ನು ಎಚ್.ಎಚ್. ದೇವರಾಜ್‌ ವಹಿಸಿಕೊಳ್ಳುವುದಾದರೇ ಕೌನ್ಸಿಲ್‌ನಲ್ಲಿ ತೀರ್ಮಾನಿಸಿ ಅವರು ಸೂಚಿಸಿದವರಿಗೆ ನೀಡಲಾಗುವುದು ಎಂದು ತಿರುಗೇಟು ನೀಡಿದರು. ನಗರಸಭೆ ಉಪಾಧ್ಯಕ್ಷ ಸುಧೀರ್‌, ಸದಸ್ಯರಾದ ಎಚ್.ಡಿ.ತಮಯ್ಯ, ಮುತ್ತಯ್ಯ, ದೇವರಾಜ್‌ ಶೆಟ್ಟಿ ಇದ್ದರು.

ಸುಮಾರು 3ಕೋಟಿ ರೂ. ತೆರಿಗೆಯನ್ನು ಅನೇಕ ಸರ್ಕಾರಿ ಇಲಾಖೆಗಳು ಬಾಕಿ ಇರಿಸಿಕೊಂಡಿವೆ. ಬಾಕಿ ಇರುವ ತೆರಿಗೆಯನ್ನು ಮುಂದಿನ ದಿನಗಳಲ್ಲಿ ವಸೂಲಿ ಮಾಡಲಾಗುವುದು.
•ಶಿಲ್ಪಾ ರಾಜಶೇಖರ್‌, ನಗರಸಭೆ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next