ದಾಂಡೇಲಿ : ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ನರಕ ರಸ್ತೆಯೆಂದೆ ಜನರ ಹಿಡಿಶಾಪಕ್ಕೆ ಕಾರಣವಾದ ರಸ್ತೆ ಇದು. ಅಂದ ಹಾಗೆ ನಗರದ ಪ್ರಮುಖ ರಸ್ತೆಯಾದ ಜೆ.ಎನ್.ರಸ್ತೆಯಿಂದ ಅಂಚೆ ಕಚೇರಿಗೆ ಹೋಗುವ ರಸ್ತೆಯಿದು. ಇದೇ ರಸ್ತೆಯ ಪಕ್ಕದಲ್ಲಿ ರೋಟರಿ ಶಾಲೆಯಿದೆ, ಪಶುವೈದ್ಯ ಆಸ್ಪತ್ರೆಯಿದೆ, ಇ.ಎಸ್.ಐ ಆಸ್ಪತ್ರೆಯಿದೆ. ಚರ್ಚ್, ದೇವಸ್ಥಾನ, ಮಸೀದಿ ಎಲ್ಲವು ಇದೆ. ಇಂತಹ ಪ್ರದೇಶದ ರಸ್ತೆಯ ಪರಿಸ್ಥಿತಿ ಮಾತ್ರ ಹೇಳತೀರದು.
ಈ ರಸ್ತೆಯಲ್ಲಿ ಒಂದೆರಡು ಸಲ ಅಡ್ಡಾಡಿ ಬಂದರೇ ಆಸ್ಪತ್ರೆಗೆ ಹೋಗುವುದು ನಿಶ್ಚಿತ ಎನ್ನುವುನ್ನು ಖಚಿತ ಪಡಿಸುತ್ತಿವೆ ಇಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿರುವ ಗಬ್ಬು ನಾರುತ್ತಿರುವ ತ್ಯಾಜ್ಯ. ನಗರ ಸಭೆಯ ಆರೋಗ್ಯ ವಿಭಾಗಕ್ಕೆ ಮಾತ್ರ ಇಲ್ಲಿಯ ಗಲೀಜು, ಅಸ್ವಚ್ಚತೆ ಕಾಣದೆ ಇರುವುದು ನಗರ ಸಭೆಯ ಆರೋಗ್ಯ ವಿಭಾಗದ ಕಾರ್ಯಕ್ಷಮತೆಗೆ ಪಕ್ಕ ಉದಾಹರಣೆ.
ಇಲ್ಲಿ ಈ ರೀತಿಯ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿಕೊಂಡಿರುವುದರಿಂದ ಹಂದಿಗಳು, ಬಿಡಾಡಿ ನಾಯಿಗಳ ಸಂಖ್ಯೆ ವ್ಯಾಪಕವಾಗಿ ಏರುತ್ತಿದೆ. ಇಲ್ಲೆ ರೋಟರಿ ಶಾಲೆಯಿರುವುದರಿಂದ ಶಾಲೆಯ ಮಕ್ಕಳು ಹೆಚ್ಚಾಗಿ ಇದೇ ರಸ್ತೆಯನ್ನು ಅವಲಂಭಿಸುವುದರಿಂದ ಆಹಾರವನ್ನರಸಿ ಬರುವ ಬಿಡಾಡಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಇಷ್ಟಾದರೂ ಇಲ್ಲಿಯ ಸ್ವಚ್ಚತೆಗೆ ಯೋಗ್ಯ ಕ್ರಮ ಕೈಗೊಳ್ಳುವಲ್ಲಿ ನಗರ ಸಭೆ ಸಂಪೂರ್ಣ ಹಿನ್ನಡೆ ಸಾಧಿಸಿದೆ.
ಇದನ್ನೂ ಓದಿ : ಬೋನಿಗೆ ಬಿದ್ದ ಚಿರತೆಯ ಕಣ್ಣಲ್ಲಿ ಗುಳ್ಳೆ ; ಶಸ್ತ್ರ ಚಿಕಿತ್ಸೆ
ಅಹಿತಕರ ಘಟನೆ ನಡೆದ ನಂತರವೆ ನಗರ ಸಭೆಯವರು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಮಾತುಗಳು ನಗರದಲ್ಲಿ ಕೇಳಿ ಬರತೊಡಗಿದೆ. ಅವಘಡ ಸಂಭವಿಸುವ ಮುನ್ನ ನಗರ ಸಭೆಯವರು ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹವಾಗಿದೆ.