Advertisement
ರೈಲ್ವೇ ಸ್ಟೇಷನ್‌ಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು ಅಸಹನೀಯವಾಗಿ ಕಾಣುತ್ತಿದೆ. ಬೆಳಪು ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕವು ಎಲ್ಲೂರು ಮತ್ತು ಬೆಳಪು ಗ್ರಾಮ ಪಂಚಾಯತ್ ನಡುವೆ ಹಂಚಿ ಹೋಗಿದ್ದು ಇಲ್ಲಿಗೆ ಕಸ ತಂದು ಸುರಿದು ಹೋಗುವವರನ್ನು ಪತ್ತೆ ಹಚ್ಚುವುದು ಸ್ಥಳೀಯ ಬೆಳಪು ಗ್ರಾಮ ಪಂಚಾಯತ್‌ಗೂ ಸವಾಲಾಗಿದೆ.
Related Articles
Advertisement
ಬೆಳಪು ರೈಲ್ವೇ ಸ್ಟೇಷನ್ ರಸ್ತೆಯ ಇಕ್ಕೆಲಗಳಲ್ಲಿ ಕಸ ತ್ಯಾಜ್ಯಗಳು ತುಂಬಿ ಹೋಗಿದ್ದರೂ ಗ್ರಾಮ ಪಂಚಾಯತ್ ಆಗಲೀ, ರೈಲ್ವೇ ಇಲಾಖೆಯಾಗಲೀ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಇಲ್ಲಿ ಶೇಖರಣೆಯಾಗಿರುವ ಕಸ ತ್ಯಾಜ್ಯಗಳನ್ನು ನಾಯಿ, ಬೆಕ್ಕು, ನರಿ, ಇಲಿಗಳು ರಸ್ತೆಯಲ್ಲೆಲ್ಲಾ ಚೆಲ್ಲಾಡುತ್ತಿದ್ದು, ರಸ್ತೆಯಲ್ಲಿ ಓಡಾಡುವವರು ಮೂಗಿನ ಮೇಲೆ ಬೆರಳಿಟ್ಟುಕೊಂಡು ಓಡಾಡುವಂತಾಗಿದೆ. ಸಂಬಂಧಪಟ್ಟವರೆಲ್ಲರೂ ಈ ರಸ್ತೆಯಲ್ಲೇ ದಿನನಿತ್ಯ ಓಡಾಡುತ್ತಿದ್ದರೂ, ಯಾರೂ ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ರಾಷ್ಟಿ ಯ ಹೆದ್ದಾರಿ 66ರ ಉಚ್ಚಿಲದಿಂದ ಕುಂಜೂರು ರೈಲ್ವೇ ಬ್ರಿಡ್ಜ್ ಮೂಲಕವಾಗಿ ರೈಲ್ವೇ ಸ್ಟೇಷನ್, ಕಾಪು (ಬೆಳಪು) ಸರಕಾರಿ ಪಾಲಿಟೆಕ್ನಿಕ್ ಕೇಂದ್ರ, ಬೆಳಪು ಕೈಗಾರಿಕಾ ಪ್ರದೇಶ, ನಿರ್ಮಾಣ ಹಂತದಲ್ಲಿರುವ ಅತ್ಯಾಧುನಿಕ ವಿeನ ಸಂಶೋಧನಾ ಕೇಂದ್ರ, ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಬೆಳಪು ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಪ್ರವಾಸಿ ತಾಣವಾಗಿರುವ ಬೆಳಪು ಜಾರಂದಾಯ ಕೆರೆ, ಬೆಳಪು ಮಸೀದಿ, ಬೆಳಪು ಹಝ್ರತ್ ಸೂಫಿ ಅಬ್ದುಲ್ ರೆಹಮಾನ್ ಶಾ ಬಾಬಾ ದರ್ಗಾ, ಬೆಳಪು ಸರಕಾರಿ ಸಂಯುಕ್ತ ಫ್ರೌಢಶಾಲೆ ಸಹಿತವಾಗಿ ವಿವಿಧ ಪ್ರಮುಖ ಸ್ಥಳಗಳಿಗೆ ತೆರಳುವ ಮುಖ್ಯ ರಸ್ತೆಯೂ ಇದಾಗಿದೆ.
ಬೆಳಪು ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ತ್ಯಾಜ್ಯದ ರಾಶಿಯಿಂದಾಗಿ ನಮಗೆ ದಿನ ನಿತ್ಯ ನಡೆದಾಡಲು ಅಸಹ್ಯವೆನಿಸುತ್ತದೆ. ತ್ಯಾಜ್ಯವನ್ನು ನಾಯಿ, ಬೆಕ್ಕುಗಳು ಎಳೆದಾಡುತ್ತಿರುತ್ತವೆ. ದನ ಕರುಗಳು ಆಹಾರವನ್ನಾಗಿ ತಿನ್ನುತ್ತಿರುತ್ತವೆ. ಎಲ್ಲೆಂದರಲ್ಲಿ ತ್ಯಾಜ್ಯ ಹರಡಿದ ಪರಿಣಾಮ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಬೆಳಪು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ರೈಲ್ವೇ ಇಲಾಖೆ ಕೂಡಾ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ, ನಿವೃತ್ತ ಸುಭೇದಾರ್ ಅನಂತರಾಮ ರಾವ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಶಿವರಾತ್ರಿ ಪಾದಯಾತ್ರೆಗೆ ಮುಂದಿನ ವರ್ಷದಿಂದ ಉತ್ತಮ ವ್ಯವಸ್ಥೆ : ಜಿಲ್ಲಾ ಪಂಚಾಯಿತಿ ಸಿಇಓ
ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಸ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುವುದನ್ನು ನಿಷೇಽಸಲಾಗಿದೆ. ಗ್ರಾಮದ ವಿವಿಧೆಡೆಯಲ್ಲಿ ಸಾರ್ವಜನಿಕರು ಕಸ ಎಸೆಯುತ್ತಿದ್ದ ಪ್ರದೇಶಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಿ, ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ರೈಲ್ವೇ ಸ್ಟೇಷನ್ ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನೂ ಪತ್ತೆ ಹಚ್ಚಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು. ನಾಮಫಲಕಗಳನ್ನು ಅಳವಡಿಸಿ, ಕಸ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುವುದು. ಕಸ ತಂದು ಎಸೆಯುವವರನ್ನು ಪತ್ತೆ ಹಚ್ಚುವ ಬಗ್ಗೆ ಸೂಕ್ತ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಕಸ ತ್ಯಾಜ್ಯ ಎಸೆಯುವವರ ವಿರುದ್ಧ ಐಪಿಸಿ ಸೆಕ್ಷನ್‌ಗಳನ್ನು ಅಳವಡಿಸಿ, ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ದಂಡ ವಿಧಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷೆ ಶೋಭಾ ಭಟ್ ಮತ್ತು ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿ. ಸೋಜ ಪ್ರತಿಕ್ರಿಯಿಸಿದ್ದಾರೆ.