ಪಡುಬಿದ್ರಿ: ತ್ಯಾಜ್ಯಗಳನ್ನು ಜನವಸತಿ ಇಲ್ಲದ ಕಡೆ ಜಾಗ ನೋಡಿ ಹೂಳುವುದು ಸಾಮಾನ್ಯ. ಆದರೆ ಪಡುಬಿದ್ರಿಯಲ್ಲಿ ಹಾಗಲ್ಲ. ಜಾಗವಿಲ್ಲದ ಕಾರಣಕ್ಕೆ ನಿರ್ಮಾಣ ಹಂತದಲ್ಲಿರುವ ಗ್ರಾ.ಪಂ. ಕಟ್ಟಡ ಎದುರಿನ ಮೈದಾನದಲ್ಲೇ ಹೂಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೊಳಪಟ್ಟ ಸಾರ್ವಜನಿಕ ಬಾಲಕರ ವಸತಿ ಗೃಹದ ಸಮೀಪದಲ್ಲಿ ತ್ಯಾಜ್ಯ ಕೊಳೆತು ನಾರುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಭಟನೆಯ ಎಚ್ಚರಿಕೆಯೂ ವ್ಯಕ್ತವಾಗಿತ್ತು. ಆದರೆ ತ್ಯಾಜ್ಯ ಹೂಳಲು ಪಡುಬಿದ್ರಿ ನಡ್ಪಾಲು ಗ್ರಾಮದಲ್ಲಿ ಅವಕಾಶವಿಲ್ಲ. ಸೂಕ್ತ ಸರಕಾರಿ ಜಾಗವೂ ಇಲ್ಲದ್ದರಿಂದ ನೂತನ ಪಂಚಾಯತ್ ಕಟ್ಟಡದ ಮುಂಭಾಗದಲ್ಲೇ ಹೂಳಲು ಪಿಡಿಒ ಅವರು ನಿರ್ಧರಿಸಿದ್ದು ಜೆಸಿಬಿಯಲ್ಲಿ ಹೊಂಡ ಮಾಡಿ ತ್ಯಾಜ್ಯ ಹೂಳಲಾಗಿದೆ.
ಜಿಲ್ಲಾಧಿಕಾರಿಗೆ ಸಂದೇಶ
ತ್ಯಾಜ್ಯ ಹೂಳಲು ಜಾಗದ ಕೊರತೆ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಹೇಳಿದ್ದು, ಸದ್ಯದ ಕ್ರಮದ ಬಗ್ಗೆ ತಿಳಿಸಲಾಗಿದೆ. ಹಿಂದಿನ ಎನ್.ಟಿ.ಪಿ.ಸಿ. ಗೋಡೌನ್ ನ ಜಾಗವೊಂದಿದ್ದು ಅದನ್ನು ಪರಿಗಣಿಸಲು ಮತ್ತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಬಗ್ಗೆ ಸಭೆ ನಡೆಯಲಿದ್ದು, ಈ ವೇಳೆ ಎಲ್ಲ ವಿಚಾರಗಳನ್ನು ಅವರ ಗಮನಕ್ಕೆ ತರುವುದಾಗಿ ಪಿಡಿಒ ಪಂಚಾಕ್ಷರಿ ಸ್ವಾಮಿ ಹೇಳಿದ್ದಾರೆ.