ಬೆಂಗಳೂರು: “ಸವಾಲಿಗೂ ಕವಾಲಿಗೂ ಸೈಯರೆ ಸೈಯಾ, ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ನಾ…’ ಎನ್ನುವ “ಧಮ್’ ಸಿನಿಮಾ ಹಾಡು ಇಂದಿಗೂ ಫೇಮಸ್. ಈ ಹಾಡಿನಲ್ಲಿ ಸುದೀಪ್ ನೃತ್ಯ ಇಂದಿಗೂ ಅವರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಚಿತ್ರದ ಚಿತ್ರೀಕರಣವಾಗಿರುವುದು ಬೇರೆ ಎಲ್ಲೂ ಅಲ್ಲ. ಬಸವನಗುಡಿಯ ಗವಿಪುರ ಬಳಿಯ ಗವಿಗಂಗಾಧರೇಶ್ವರ ದೇವಸ್ಥಾನದ ಪಕ್ಕದ ವಿಶಾಲ ಪ್ರದೇಶದಲ್ಲಿ! ಆದರೆ, ಈಗ ಈ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ!
ಬಸವನಗುಡಿಯ ಹನುಮಂತನಗರ ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಆಟೋ ಟಿಪ್ಪರ್‌ಗಳ ಮೂಲಕ ಲಾರಿಗೆ ಸಾಗಿಸಲು ಗವಿ ಗಂಗಾಧರೇಶ್ವರ ದೇವಸ್ಥಾನ ಸಮೀಪದ ಸ್ಥಳವನ್ನು ಬಳಸುತ್ತಿದ್ದು, ಸ್ಥಳೀಯರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಗವಿ ಗಂಗಾಧರೇಶ್ವರ ದೇವಸ್ಥಾನ ತನ್ನದೇ ಆದ ವಿಶೇಷತೆಗಳ ಮೂಲಕ ಪ್ರಸಿದ್ಧಿ ಪಡೆದುಕೊಂಡಿದೆ. ನಾಡಪ್ರಭು ಕೆಂಪೇಗೌಡನ ರಾಜಧಾನಿಯ ಪ್ರಮುಖ ಸ್ಥಳವಾದ ಈ ಪ್ರದೇಶದ ಸುತ್ತಲೂ ಐತಿಹಾಸಿಕ ಹಿನ್ನೆಲೆ ಕಾಣುತ್ತದೆ. ಒಂದೆಡೆ ಹರಿಹರ ಬೆಟ್ಟ, ಇನ್ನೊಂದೆಡೆ ರಾಮಾಂಜನೇಯ ಬೆಟ್ಟ, ಇನ್ನೊಂದೆಡೆ ಕೆಂಪೇಗೌಡರ ಸ್ತೂಪ…
ಪಕ್ಕದಲ್ಲೇ ಹಳೆಯ ಹಳ್ಳಿ, ಈಗ ಲಕ್ಷ್ಮೀಪುರ! ಪ್ರತಿ ವರ್ಷವೂ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಸಂಧ್ಯಾ ಸೂರ್ಯಕಿರಣ ಗವಿಗಂಗಾಧರೇಶ್ವರ ದೇವಸ್ಥಾನದ ಬಸವ ವಿಗ್ರಹದ ಕೊಂಬುಗಳ ನಡುವಿಂದ ಹೊರ ಹೊಮ್ಮಿ, ಶಿವಲಿಂಗದ ಮೇಲೆ ಬೀಳುತ್ತದೆ. ಇದನ್ನು ನೋಡುವುದಕ್ಕಾಗಿಯೇ ಸಾವಿರಾರು ಜನ ಸೇರುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ ಚಿತ್ರೀಕರಣವೂ ನಡೆದಿದೆ. ಕನ್ನಡದ ಪ್ರಮುಖ ನಟರಾದ ಉಪೇಂದ್ರ, ದರ್ಶನ್, ಸುದೀಪ್ ಹಾಗೂ ದುನಿಯಾ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಮೇರು ನಟರ ಚಿತ್ರಗಳ ಮೂಹೂರ್ತಕ್ಕೆ ವೇದಿಕೆಯಾಗಿ, ಸ್ಥಳೀಯ ಸಂಸ್ಥೆಗಳ ಆದಾಯ ಮೂಲವೂ ಆಗಿದ್ದ ಈ ಪ್ರದೇಶ ದಿನೇ ದಿನೆ ಸಮಸ್ಯೆಗಳ ಕೇಂದ್ರ ಬಿಂದುವಾಗುತ್ತಿರುವುದಕ್ಕೆ ಸ್ಥಳೀಯರೂ ಬೇಸರ ವ್ಯಕ್ತಪಡಿಸುತ್ತಾರೆ. ಈ ಪ್ರದೇಶದಲ್ಲಿ ವಾರಕ್ಕೆ ಎರಡು ಬಾರಿಯಾದರೂ ಯಾವುದಾದರೂ ಸಿನಿಮ ಅಥವಾ ಟಿ.ವಿ. ಧಾರಾವಾಹಿಯ ಚಿತ್ರೀಕರಣಗಳು ನಡೆಯುತ್ತಿದ್ದವು. ವಿಶಾಲವಾದ ಪ್ರದೇಶವಾಗಿರುವುದು ಮತ್ತು ಸುತ್ತಲಿನ ನೈಸರ್ಗಿಕ ವಾತಾವರಣ ಹಾಗೂ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಹ “ಬ್ಯಾಕ್‌ಡ್ರಾಪ್’ ಈ ಪ್ರದೇಶದ ವೈಶಿಷ್ಟ್ಯ. ಈಗ ಚಿತ್ರೀಕರಣ ಇಲ್ಲವೇ ಇಲ್ಲ! ತ್ಯಾಜ್ಯ ವಿಲೇವಾರಿ ಸಂದರ್ಭದಲ್ಲಿ ಹಸಿ ತ್ಯಾಜ್ಯದ ಕಲುಷಿತ ನೀರು (ಲಿಚೆಟ್) ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ನಡೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಸ್ಥಳೀಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಮೂಗು ಮುಚ್ಚಿ ಕೂರುವ ರೋಗಿಗಳು : ಸರ್ಕಾರಿ ಆಸ್ಪತ್ರೆಗೆ ಟಿಬಿ ಸೇರಿ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳು ಲಿಚೆಟ್ ದುರ್ವಾಸನೆ ತಾಳದೆ ಮೂಗು ಮುಚ್ಚಿಕೊಂಡು ಕೂತಿರುತ್ತಾರೆ. “ಆಸ್ಪತ್ರೆಯಲ್ಲಿ ಕುಳಿತರೆ ವಾಕರಿಕೆ ಬಂದಂತಾಗುತ್ತದೆ’ ಎಂದು ಆಸ್ಪತ್ರೆಯ ಸಹಾಯಕ ಸಿಬ್ಬಂದಿ ರಾಜೇಶ್ವರಿ ಹೇಳುತ್ತಾರೆ. “ಇಲ್ಲಿ ಊಟ ಮಾಡುವುದನ್ನೇ ಬಿಟ್ಟಿದ್ದೇನೆ,’ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಟೆಕ್ನೀಶಿಯನ್ ಶ್ರೀಧರ್.
ಕೇಂದ್ರ ಸ್ಥಾನದಲ್ಲೇ ನಿಲ್ಲುವ ಗಾಡಿಗಳು : ಹನುಮಂತನಗರ ವಾರ್ಡ್‌ನ ತ್ಯಾಜ್ಯ ವಿಲೇವಾರಿಗೆ ಬಳಸುವಲಾರಿಗಳನ್ನು ನಿಲ್ಲಿಸುವುದಕ್ಕೆ ಬಿಬಿಎಂಪಿ ಆಯ್ಕೆ ಮಾಡಿಕೊಂಡಿರುವ ಪ್ರದೇಶ ಈ ವಾರ್ಡ್‌ನ ಕೇಂದ್ರ ಬಿಂದುವಾಗಿದೆ. ಇಲ್ಲಿ ಸುಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ, ಸೂಪರ್ ಸ್ಟಾರ್ ರಜನೀಕಾಂತ್ ಓದಿದ ಸುಂಕೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾರ್ಕ್, ಸಾರ್ವಜನಿಕ ಗ್ರಂಥಾಲಯ ಹಾಗೂ ಸರ್ಕಾರಿ ಆಸ್ಪತ್ರೆ ಇದೆ. ಲಿಚೆಟ್ ಸಮಸ್ಯೆಯಿಂದ ಇತ್ತೀಚೆಗೆ ಈ ಪ್ರದೇಶದಲ್ಲಿ ಓಡಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಾರ್ಕ್ ಹಾಗೂ ಗ್ರಂಥಾಲಯ ವ್ಯವಸ್ಥೆ ಇದೆಯಾದರೂ, ದುರ್ನಾತದ ಸಹವಾಸವೇ ಬೇಡ ಎಂದು ಸಾರ್ವಜನಿಕರು ದೂರ ಸರಿಯುತ್ತಿದ್ದಾರೆ.
ವಾಹನ ನಿಲ್ಲುವ ಜಾಗದಲ್ಲಿ ಮನೆಗಳಿಲ್ಲ! : ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹನುಮಂತನಗರ ವಾರ್ಡ್ ಬಿಬಿಎಂಪಿ ಸದಸ್ಯ ಎಚ್.ಎ. ಕೆಂಪೇಗೌಡ, “ಹನುಮಂತ ನಗರ ವಾರ್ಡ್‌ನ ಬಹುತೇಕ ರಸ್ತೆಗಳ ವಿಸ್ತೀರ್ಣ ಕಡಿಮೆ. ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಜಾಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ನಿಲ್ಲಿಸುತ್ತಿರುವ ಜಾಗದ ಸಮೀಪ ಮನೆಗಳಿಲ್ಲದ ಕಾರಣ, ತ್ಯಾಜ್ಯ ಸಾಗಿಸುವ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಪರ್ಯಾಯ ಸ್ಥಳ ಗುರುತಿಸಿ, ಸಮಸ್ಯೆಗೆ ಪರಿಹರಿಸಲಾಗುವುದು ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿ ವಾಹನಗಳಿಂದ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಕೋರಲಾಗುವುದು
. ● ಮನೋರಂಜನ್ ಹೆಗ್ಡೆ, ಬಿಬಿಎಂಪಿ ಆರೋಗ್ಯಾಧಿಕಾರಿ
-ಹಿತೇಶ್ ವೈ