Advertisement
ಪಾರ್ಕ್ ಅಂದಮೇಲೆ ದಿನಂಪ್ರತಿ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಂಬಂಧಪಟ್ಟ ಇಲಾಖೆಯ ಕರ್ತವ್ಯ. ಆದರೆ, ನಗರದ ಕದ್ರಿ ಪಾರ್ಕ್ ಒಳಗೆ ಸ್ವಚ್ಛವಾಗಿಲ್ಲ. ‘ಪಾರ್ಕ್ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂಬ ನಾಮಫಲಕವನ್ನು ಹೆಚ್ಚಿನ ಪ್ರವಾಸಿಗರು ಪಾಲನೆ ಮಾಡುತ್ತಿಲ್ಲ. ಇದೇ ಕಾರಣಕ್ಕೆ ಪಾರ್ಕ್ ಒಳಗೆ ಚಾಕೋಲೇಟ್ ರ್ಯಾಪರ್, ನೀರಿನ ಬಾಟಲಿಗಳು, ಪಾನೀಯ ಗ್ಲಾಸ್ ಸಹಿತ ಮತ್ತಿತರ ತ್ಯಾಜ್ಯಗಳು ಬಿದ್ದಿವೆ. ಪಾರ್ಕ್ ಒಳಗಿರುವ ಕೆಲವೊಂದು ಕಸದ ಬುಟ್ಟಿಗಳಲ್ಲಿ ತ್ಯಾಜ್ಯಗಳು ಪೂರ್ತಿಯಾಗಿ ತುಂಬಿದ್ದು, ವಿಲೇವಾರಿ ಮಾಡದ ಕಾರಣದಿಂದ ಹೆಚ್ಚುವರಿ ಕಸ ಅಲ್ಲೇ ಕೆಳಗೆ ಬಿದ್ದುಕೊಂಡಿವೆ.
ಕೊಟ್ಟಾರ ಕ್ರಾಸ್‌ನಿಂದ ಉರ್ವಸ್ಟೋರ್‌ಗೆ
ತೆರಳುವ ಒಳರಸ್ತೆಯ ಬಳಿ ಇರುವ ತೊಟ್ಟಿಯೊಂದರಲ್ಲಿ ಕಸ ಹಾಕಲಾಗುತ್ತಿದ್ದು, ಕೆಲವು ದಿನ ಕಳೆದರೂ ಕಸ ಅದರಲ್ಲಿಯೇ ಬಿದ್ದಿರುತ್ತದೆ. ಕೊಳೆತ ವಾಸನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬುತ್ತಿದೆ. ಇದರ ಪಕ್ಕದಲ್ಲೇ ಮಡಕೆ ಚೂರು, ಕಲ್ಲುಗಳು, ಸೀಯಾಳ ಸಿಪ್ಪೆ, ಗ್ಲಾಸ್‌ಗಳನ್ನು ರಾಶಿ ಹಾಕಲಾಗಿದ್ದು, ಪಾದಚಾರಿಗಳಿಗೆ ಅಪಾಯ ಆಹ್ವಾನಿಸುವಂತಿದೆ. ಕದ್ರಿ ಬಳಿಯ ಬಾಲಭವನ ರಸ್ತೆ ಬದಿಯಲ್ಲಿ ಕಸವನ್ನು ರಾಶಿ ಹಾಕಲಾಗಿದೆ. ಪಕ್ಕದಲ್ಲಿಯೇ ಕದ್ರಿ ಪಾರ್ಕ್ ಇರುವುದರಿಂದ, ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇನ್ನು, ಸುಲ್ತಾನ್ ಬತ್ತೇರಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಕುಳಿತುಕೊಳ್ಳಲು ಕಲ್ಲಿನ ಬೆಂಚು ಇದೆ. ಆದರೆ ಇದರ ಪಕ್ಕದಲ್ಲಿಯೇ ಕೊಳೆತ ತ್ಯಾಜ್ಯಗಳನ್ನು ಹಾಕಲಾಗಿದ್ದು, ಪ್ರವಾಸಿಗರಿಗೆ ಕಿರಿ ಕಿರಿ ಉಂಟಾಗುತ್ತಿದೆ.
Related Articles
ಕಸ ಹಾಕುವವರ ಪ್ರಮಾಣ ಕಡಿಮೆ
ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಅವರು ‘ಉದಯವಾಣಿ ಸುದಿನ’ ಜತೆ ಮಾತನಾಡಿ, ಕೆಲವು ವರ್ಷಗಳಿಗೆ ಹೋಲಿಸಿದರೆ ರಸ್ತೆ ಬದಿ ಕಸ ಹಾಕುವವರ ಪ್ರಮಾಣ ತುಂಬಾ ಕಡಿಮೆಯಾಗಿದೆ. ನಗರಕ್ಕೆ ಆ್ಯಂಟನಿ ಮ್ಯಾನೇಜ್‌ಮೆಂಟ್ ಬರುವ ಮೊದಲು ಸುಮಾರು 900 ಕಡೆಗಳಲ್ಲಿ ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿದ್ದರು. ಬಳಿಕ 100 ಜಾಗಗಳಿಗೆ ಇಳಿಯಿತು. ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದು, ಇದರಿಂದಾಗಿ ನಗರದ ಹೃದಯಭಾಗಗಳಲ್ಲಿ ಕಸ ಹಾಕುವವರ ಸಂಖ್ಯೆ ಇಳಿದಿದೆ ಎಂದು ತಿಳಿಸಿದ್ದಾರೆ.
Advertisement
ಫಲ್ಗುಣಿ ಒಡಲಲ್ಲಿ ಕಸದ ರಾಶಿಸುಲ್ತಾನ್ ಬತ್ತೇರಿ ಬಳಿ ಇರುವ ಫಲ್ಗುಣಿ ನದಿ ಒಡಲು ಕಸದಿಂದ ಕಲ್ಮಶವಾಗಿದೆ. ಬೈಕ್, ಕಾರುಗಳಲ್ಲಿ ಬರುವ ಅನೇಕ ಮಂದಿ, ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಫಲ್ಗುಣಿ ನದಿಗೆ ಬಿಸಾಡುತ್ತಿದ್ದಾರೆ. ಅದರಲ್ಲಿಯೂ ಪ್ಲಾಸ್ಟಿಕ್ ಬಾಟಲಿ, ಬಿಯರ್ ಬಾಟಲಿ ಸೇರಿದ್ದು, ನದಿಯ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಕಲ್ಮಶವಾಗಿದೆ. ರಸ್ತೆ ಬದಿಯಲ್ಲಿ ಗುಜರಿ ಸೋಫಾ !
ಕೊಟ್ಟಾರಕ್ರಾಸ್‌ನಿಂದ ಇನ್‌ಫೋಸಿಸ್ ಕಡೆಗೆ ಬರುವ ರಸ್ತೆಯಲ್ಲಿ ಕೆಲವು ತಿಂಗಳುಗಳಿಂದ ರಸ್ತೆ ಬದಿಯಲ್ಲಿ ಎರಡು ಗುಜರಿ ಸೋಫಾ ಇರಿಸಲಾಗಿದೆ. ಇವುಗಳಿಂದ ಯಾವುದೇ ಉಪಯೋಗವಿಲ್ಲ, ಬದಲಾಗಿ ಸ್ಪಂಜ್ ಹೊರಬಂದಿದ್ದು ತಾಜ್ಯವಾಗಿದೆ. ಮಳೆ ಬಂದರೆ ಸೊಳ್ಳೆಗಳ ತೊಂದರೆಯನ್ನು ಸುತ್ತಮುತ್ತಲಿನ ಮಂದಿ ಅನುಭವಿಸುತ್ತಿದ್ದಾರೆ. ಪಾಲಿಕೆಗೆ ಸವಾಲು
ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಕಸ ಹಾಕುವುದನ್ನು ತಡೆಯುವುದು ಪಾಲಿಕೆಗೆ ಸವಾಲಾಗಿದೆ. ರಸ್ತೆ ಬದಿಗಳಲ್ಲಿ ಬಿದ್ದಿರುವ ಕಸಗಳನ್ನು ಬೆಳಗ್ಗಿನ ಸಮಯದಲ್ಲಿ ಕಸ ಗುಡಿಸುವ ಪೌರಕಾರ್ಮಿಕರಲ್ಲಿ ವಿಲೇವಾರಿ ಮಾಡಲು ಹೇಳಿದ್ದೇವೆ. ಸಾರ್ವಜನಿಕರಿಗೆ ಎಷ್ಟೇ ಮನವಿ ಮಾಡಿದರೂ, ಪ್ರಯೋಜನವಾಗುತ್ತಿಲ್ಲ. ಪಾಲಿಕೆಯ ಆರೋಗ್ಯ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
– ಭಾಸ್ಕರ್ ಕೆ., ಮೇಯರ್