ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವೊಂದು ಕಡೆಗಳಲ್ಲಿ ಸಾರ್ವಜನಿಕರು ರಸ್ತೆ ಬದಿ ಕಸ ಬೀಸಾಡುತ್ತಿದ್ದು, ಇದರಿಂದಾಗಿ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.
ನಗರದ ಹಲವು ಕಡೆಗಳಲ್ಲಿ ರಸ್ತೆ ಬದಿ ಕಸ ಬಿಸಾಡಿ ಆ ಪ್ರದೇಶ ಇದೀಗ ಬ್ಲ್ಯಾಕ್‌ಸ್ಪಾಟ್ ಆಗಿ ನಿರ್ಮಾಣವಾಗಿದೆ. ನಗರದಲ್ಲಿ ಹೆಚ್ಚಾಗಿ ಕಸ ಬಿಸಾಡುವ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಲಾಗುತ್ತದೆ ಎಂದು ಸ್ಥಳೀಯಾಡಳಿತ ಹೇಳಿತ್ತಾದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳಲಿಲ್ಲ. ಇದರಿಂದಾಗಿ ನಗರದ ರಸ್ತೆ ಬದಿಗಳಲ್ಲಿ ಕೊಳತೆ ವಸ್ತುಗಳ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ.
ಸಮಸ್ಯೆಗೆ ಮುಕ್ತಿ ದೊರಕಿಲ್ಲ :
ಬಿಕರ್ನಕಟ್ಟೆ ಶಾಲೆ ಬಳಿ ಅನೇಕ ದಿನಗಳಿಂದ ಕಸ ಹಾಕುತ್ತಿದ್ದು, ನಗರದ ಸೌಂದರ್ಯ ಇದರಿಂದಾಗಿ ಹಾಳಾಗುತ್ತಿದೆ. ಶಾಲಾ ವಠಾರ ಬಳಿ ಕಸ ರಾಶಿ ಹಾಕುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದೆ. ಈ ಕುರಿತಂತೆ ಸಾರ್ವಜನಿಕರು ಮನಪಾಕ್ಕೆ ಅನೇಕ ಬಾರಿ ದೂರು ನೀಡಿದ್ದು, ಆರೋಗ್ಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೂ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ದೊರಕಿಲ್ಲ.
ನಗರದ ಕೊಟ್ಟಾರ ಬಳಿಯ ಶಾಲೆಯ ಪಕ್ಕವೂ, ಕೊಟ್ಟಾರಕ್ರಾಸ್, ಬಿಜೈ ಬಳಿಯೂ ರಸ್ತೆ ಬದಿ ಕಸ ಬಿಸಾಡಲಾಗುತ್ತಿದೆ. ನಗರದಲ್ಲಿ ಕಸ ವಿಂಗಡನೆ ನಿಯಮ ಕಡ್ಡಾಯವಾಗಿ ಜಾರಿಗೊಂಡ ಬಳಿ ಈ ರೀತಿ ರಸ್ತೆ ಬದಿ ಬೀಸಾಡಿದ ಕಸವನ್ನು ಸ್ವತ್ಛತ ಕಾರ್ಮಿಕರು ಕೊಂಡೊಯ್ಯುತ್ತಿಲ್ಲ. ಇದರಿಂದಾಗಿ ಕಸಗಳೆಲ್ಲ ರಸ್ತೆ ಬದಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬರುತ್ತಿದೆ.
ನಗರದ ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿ ಕಸ ಬಿಸಾಡುತ್ತಿರುವುದು ಗಮನಕ್ಕೆ ಬಂದಿದೆ. ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಚಿಂತನೆ ಇದೆ. ಅದೇ ರೀತಿ, ನಗರದ ಯಾವೆಲ್ಲಾ ಕಡೆಗಳಲ್ಲಿ ರಸ್ತೆ ಬದಿ ಕಸ ಬಿಸಾಡಲಾಗುತ್ತದೆ ಎಂದು ಗುರುತಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುವುದು.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್