ಮದ್ದೂರು: ಪಟ್ಟಣದ ಶಿವಪುರದ ಶಿಂಷಾ ನದಿ ಸೇತುವೆ ಬಳಿ ರಾಶಿಗಟ್ಟಲೆ ತ್ಯಾಜ್ಯ ವಸ್ತು ಸುರಿಯುವುದರಿಂದ ನೀರು ಮಲಿನಗೊಳ್ಳುತ್ತಿದ್ದು ಅಧಿಕಾರಿಗಳು ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪುರಸಭೆ ವ್ಯಾಪ್ತಿಯ ವಾರ್ಡ್ ನಂ.23ರ ಶಿಂಷಾ ಸೇತುವೆ ಬಳಿ ಕೆಲವರು ತ್ಯಾಜ್ಯ ವಸ್ತುಗಳನ್ನು ಶಿಂಷಾ ನದಿ ದಡದಲ್ಲೇ ಸುರಿದಿದ್ದು, ದುರ್ವಾಸನೆ ಬೀರುವ ಜತೆಗೆ ಜಲಚರಗಳು ಸಾವನ್ನಪ್ಪಿತ್ತಿವೆ.
ನದಿ ನೀರು ಮಲಿನ: ಮೈಸೂರು-ಬೆಂಗಳೂರು ಹೆದ್ದಾರಿ ಬದಿಯ ಶಿಂಷಾ ನದಿ ದಡದ ಸೇತುವೆ ಬಳಿ ಆಸ್ಪತ್ರೆಯ ತ್ಯಾಜ್ಯ ವಸ್ತುಗಳಾದ ಬ್ಯಾಂಡೇಜ್, ಸಿರಂಜ್, ಔಷಧಿ ಬಾಟಲ್, ಬಟ್ಟೆ ಹಾಗೂ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ರಾತ್ರಿ ವೇಳೆ ಪ್ಲಾಸ್ಟಿಕ್ ಕವರ್‌ನಲ್ಲಿ ತಂದು ಶಿಂಷಾ ನದಿ ಒಡಲಲ್ಲಿ ಸುರಿದು ನದಿ ನೀರು ಮಲಿನ ಗೊಳಿಸುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಸಾಂಕ್ರಾಮಿಕ ರೋಗ ಭೀತಿ: ಕಳೆದ ಒಂದು ವಾರದಿಂದ ಶಿಂಷಾ ನದಿ ದಡದಲ್ಲಿ ಸುಮಾರು 6 ಲೋಡ್‌ಗಳಷ್ಟು ತ್ಯಾಜ್ಯ ಸುರಿಯಲಾಗಿದೆ. ವಾರದಿಂದ ಸುರಿದ ಧಾರಾಕಾರ ಮಳೆಗೆ ಶಿಂಷಾ ನದಿ ತುಂಬಿ ಹರಿಯುತ್ತಿದ್ದು ನದಿ ದಡದ ತ್ಯಾಜ್ಯ ನೀರಿನಲ್ಲಿ ಬೆರೆತು ನೀರು ಕಲುಷಿತಗೊಂಡು ಜನಜಾನು ವಾರುಗಳಿಗೂ ರೋಗರುಜಿನಗಳು ಹರಡಲಿದೆ.
ಕಲುಷಿತ ನೀರಲ್ಲೇ ಸ್ನಾನ: ಶಿಂಷಾ ನದಿ ದಡದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿದ್ದು ಪ್ರತಿನಿತ್ಯ ನೂರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಕಲುಷಿತ ನದಿ ನೀರಿನಲ್ಲೇ ಸ್ನಾನ ಮಾಡಿ ದೇವಾಲಯಕ್ಕೆ ಹೋಗಬೇಕಾಗಿದೆ. ಶಿಂಷಾ ನದಿ ದಡದಲ್ಲಿ ರಾತ್ರಿ ವೇಳೆ ತ್ಯಾಜ್ಯ ಸುರಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ತ್ಯಾಜ್ಯ ವಿಲೇವಾರಿ ಮಾಡಲು ಪುರಸಭೆ ಅಧಿಕಾರಿಗಳ ಅಗತ್ಯ ಕ್ರಮ ವಹಿಸಬೇಕಾಗಿದೆ.
ಶಿಂಷಾ ನದಿ ದಡದಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಈಗಷ್ಟೇ ತಮ್ಮ ಗಮನಕ್ಕೆ ಬಂದಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ಸ್ಥಳೀಯ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತ್ಯಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ವಹಿಸಲಾಗುವುದು.
●ಮುರುಗೇಶ್, ಪುರಸಭೆ ಮುಖ್ಯಾಧಿಕಾರಿ