Advertisement

ಕಸ ವಿಲೇವಾರಿ ಅಸಮರ್ಪಕ

12:51 PM May 14, 2019 | pallavi |

ಹುನಗುಂದ: ಪಟ್ಟಣದ ಪ್ರತಿಯೊಂದು ವಾರ್ಡ್‌ಗಳ ಕಸ ವಿಲೇವಾರಿಯಾಗದೇ ಬಹು ದೊಡ್ಡ ಸಮಸ್ಯೆಯಾಗಿ ಪುರಸಭೆಗೆ ಕಾಡುತ್ತಿದೆ. ಈ ಕಸದ ಸಮಸ್ಯೆಗೆ ಮುಕ್ತಿ ನೀಡಲು ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದರೂ ಸಹ ಘನ ತ್ಯಾಜ್ಯವನ್ನು ವಿಭಜಿಸುವ ಮಷಿನ್‌ ಇಲ್ಲದೇ ನಿರ್ವಹಣಾ ಘಟಕ ತ್ಯಾಜ್ಯದಿಂದ ತುಂಬಿ ತುಳುಕುತ್ತಿದೆ.

Advertisement

ತಾಜ್ಯ ಘಟಕದಲ್ಲಿ ಸಂಗ್ರಹಣೆಗೊಂಡ ತ್ಯಾಜ್ಯ ಗಾಳಿಗೆ ಹಾರಿ ಮತ್ತೇ ನಗರದಲ್ಲಿ ಬರುತ್ತಿದ್ದು, ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಘನ ತ್ಯಾಜ್ಯ ನಿರ್ವಹಣಾ ಘಟಕ ಹಳ್ಳ ಹಿಡಿದಿದೆ.

ಪಟ್ಟಣದ ಮಲ್ಲಿಕಾರ್ಜುನ ನಗರದ ಹತ್ತಿರ ಗುಡ್ಡದಲ್ಲಿ 2012-13ರಲ್ಲಿ 12 ಎಕರೆ 25 ಗುಂಟೆ ಪ್ರದೇಶದಲ್ಲಿ 88.29 ಲಕ್ಷ ರೂ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲಾಗಿದ್ದು. ಪಟ್ಟಣದ ಪ್ರತಿಯೊಂದು ವಾರ್ಡಗಳಿಂದ ಪ್ರತಿದಿನ ಸಂಗ್ರಹಿಸುವ ಅಂದಾಜು 30ರಿಂದ 40ಟನ್‌ ಕಸವನ್ನು ಇದೇ ಸ್ಥಳದಲ್ಲಿ ಹಾಕಲಾಗುತ್ತಿದೆ. ಈಗಾಗಲೇ ಸಾಕಷ್ಟು ತ್ಯಾಜ್ಯ ಈ ಸ್ಥಳದಲ್ಲಿ ಸಂಗ್ರಹವಾಗಿದ್ದರೂ ಕಸವನ್ನು ಬೇರ್ಪಡಿಸಿ ಗೊಬ್ಬರ ತಯಾರಿಸದೇ ಇರುವುದರಿಂದ ಕಸವನ್ನು ಹಾಕಲು ಸ್ಥಳವಿಲ್ಲದೇ ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಗಳೇ ಪುರಸಭೆಯ ಕಸ ವಿಲೇವಾರಿ ಕೇಂದ್ರಗಳಾಗಿವೆ.

ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಪುರಸಭೆಯಿಂದ ಖರ್ಚು ಮಾಡಿದ ಹಣ: ಪುರಸಭೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸುವುದ್ದಕ್ಕಾಗಿ ಪುರಸಭೆಯ 13 ಮತ್ತು 14ನೇ ಹಣಕಾಸಿನ ಅನುದಾನದಲ್ಲಿ ಸಾಕಷ್ಟು ಹಣ ಖರ್ಚು ಮಾಡಲಾಗಿದೆ.

15 ಲಕ್ಷ ಅನುದಾನದಲ್ಲಿ ಲ್ಯಾಂಡ್‌ ಫೀಲ್ ಸೈಟ್‌ನಲ್ಲಿ ಎಚ್‌ಡಿಪಿಇ ಲೈನರ್‌ ಅಳವಡಿಕೆ, ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಕಾಂಪೌಂಡ್‌ ವಿಸ್ತಿರ್ಣ ಮತ್ತು ಗೋಡೆ ಗೇಟ್ ಸೇರಿದಂತೆ 33.25 ಲಕ್ಷ, ಗೇಟ್ ಅಳವಡಿಕೆ, ವಾಚಮನ್‌ ಶೆಡ್‌ ರಿಪೇರಿ ಮತ್ತು ರಸ್ತೆಗಾಗಿ 6 ಲಕ್ಷ, ಘನ ತ್ಯಾಜ್ಯವನ್ನು ವಿಭಜಿಸಿದ ಗೊಬ್ಬರ ಸಂಗ್ರಹಿಸಲು ಸಂಗ್ರಹಗಾರಕ್ಕೆ 6.50 ಲಕ್ಷ, ಶೆಗ್ರಿಗೆಷನ್‌ ಮಷಿನ್‌ಗಾಗಿ ಶೆಡ್‌ ನಿರ್ಮಾಣಕ್ಕಾಗಿ 4 ಲಕ್ಷ, ಘನತ್ಯಾಜ್ಯ ನಿರ್ವಹಣೆ ಘಟಕಕ್ಕೆ ಸಿ.ಸಿ ರಸ್ತೆ ಚರಂಡಿ ಕಾಮಗಾರಿಗಾಗಿ 6 ಲಕ್ಷ, ಶೆಗ್ರಿಗೆಷನ್‌ ಮಷಿನ್‌ ಖರೀದಿಗಾಗಿ 5 ಲಕ್ಷ, ಘಟಕಕ್ಕೆ ವಿದ್ಯುತ್‌ ಕಂಬ ಟಿಸಿ ಅಳವಡಿಕೆಗಾಗಿ 2.54 ಲಕ್ಷ ಅನುದಾನ ಸೇರಿ ರೂ. 88.29 ಲಕ್ಷ ಹಣ ಖರ್ಚು ಮಾಡಲಾಗಿದೆ. ಆದರೂ ಸರಿಯಾಗಿ ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂಬುದು ನಿವಾಸಿಗಳ ಆರೋಪ.

Advertisement

ಘನತ್ಯಾಜ್ಯ ವಿಲೇವಾರಿ ಮಷಿನ್‌ ತುಕ್ಕು: 5 ಲಕ್ಷ ಅನುದಾನದಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಬೇರ್ಪಡಿಸಲು ಅಗತ್ಯವಾದ ಮಷಿನ್‌ ಖರೀದಿಯಾಗಿ ಬರೋಬರಿ 6 ವರ್ಷ ಗತಿಸಿದರೂ ಅದು ಪುರಸಭೆ ಕಾರ್ಯಾಲಯದಲ್ಲಿಯೇ ಜಂಗು ಹತ್ತಿ ಹೋಗುತ್ತಿದೆ. ಅದನ್ನು ಕಸ ವಿಲೇವಾರಿ ಘಟಕಕ್ಕೆ ಅಳವಡಿಸಲು ಪುರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ವಿವಿಧ ಗ್ರಾಮ ರಸ್ತೆಗಳಲ್ಲಿ ಕಸ ವಿಲೇವಾರಿ: ಪಟ್ಟಣದ ಕಸವನ್ನು ನೇರವಾಗಿ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಗೆದುಕೊಂಡು ಹೋಗದೇ ರಾಮವಾಡಗಿ, ಚಿತ್ತವಾಡಗಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಆ ರಸ್ತೆಗುಂಟ ಹೋಗುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.

ಹೆಚ್ಚಾದ ವಾಯುಮಾಲಿನ್ಯ: ಘನ ತ್ಯಾಜ್ಯ ಘಟಕದಲ್ಲಿ ಕಸದ ಜೊತೆಗೆ ಬಂದ ಪ್ಲಾಸ್ಟಿಕ್‌ ಹಾಳೆ ಸೇರಿದಂತೆ ವಿವಿಧ ಪ್ಲಾಸ್ಟಿಕ್‌ ವಸ್ತುಗಳನ್ನು ಪುರಸಭೆ ಪೌರಕಾರ್ಮಿಕರು ಸುಡುವುದರಿಂದ ಆ ಕೆಟ್ಟ ದುವಾರ್ಸನೆಯು ನಗರದ ತುಂಬ ಹಬ್ಬಿ ವಾಯುಮಾಲಿನ್ಯ ನಿರ್ಮಾಣ ಮಾಡುವುದರ ಜೊತೆಗೆ ಹಲವು ಶ್ವಾಸಕೋಶದ ರೋಗಗಳ ಸೃಷ್ಟಿಗೆ ಕಾರಣವಾಗುತ್ತಿದೆ.

ಪುರಸಭೆ ಆದಾಯಕ್ಕೆ ಕತ್ತರಿ: ತ್ಯಾಜ್ಯ ವಸ್ತುಗಳಿಂದ ಘಟಕದಲ್ಲಿ ಕಾಂಪೋಸ್ಟ್‌ ಗೊಬ್ಬರ ಮಾಡಲು ವಿಂಡೋಪ್ಲಾಟ್ಫಾರ್ಮ್ ಮಾಡಲಾಗಿದೆ. ಆದರೆ, ಅದನ್ನು ಸರಿಯಾಗಿ ಬಳಕೆ ಮಾಡದ ಕಾರಣದಿಂದ ಅದಕ್ಕೆ ವೆಚ್ಚ ಮಾಡಿದ ಹಣವೂ ಕೂಡಾ ವ್ಯರ್ಥವಾಗಿದೆ.

ವಿಲೇವಾರಿ ನಿರ್ವಹಣಾ ಘಟಕದ ಹಲವಾರು ಕಾಮಗಾರಿ ನಡೆದಿವೆ. 1.50ಕೋಟಿ ಅನುದಾನದಲ್ಲಿ ಅದರ ಅಭಿವೃದ್ಧಿ ಕಾರ್ಯದ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ. ಘಟಕಕ್ಕೆ ಬೇಕಾದ ಶಿಗ್ರಿಗೆಷನ್‌ ಮಷಿನ್‌ ಶೀಘ್ರ ಸ್ಥಾಪಿಸಿ ಗೊಬ್ಬರ ತಯಾರಿಸುವ ಕಾರ್ಯ ಮಾಡುತ್ತೇವೆ.

•ಜಗದೀಶ ಈಟಿ, ಮುಖ್ಯಾಧಿಕಾರಿ ಪುರಸಭೆ

•ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next