Advertisement
ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಪ್ರಮುಖ ವಾಣಿಜ್ಯ ಕೇಂದ್ರವಾದ ಚನ್ನಪಟ್ಟಣ–ಹಲಗೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿಯಲ್ಲಿ ಕಸವನ್ನು ಗುಡ್ಡೆ ಹಾಕುತ್ತಿದೆ. ಇದನ್ನು ಈವರೆಗೆ ಬೇಕಾಬಿಟ್ಟಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಈಗ ಕಸದ ಗುಡ್ಡೆಗೆ ನೇರವಾಗಿ ಬೆಂಕಿ ಹಾಕುವ ಮೂಲಕ ತ್ಯಾಜ್ಯವನ್ನು ಹೊರ ಸಾಗಿಸದೆ, ಅಲ್ಲಿಯೇ ಸುಟ್ಟು ಹಾಕಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.
Related Articles
Advertisement
ಇಬ್ಬರು ಪಿಡಿಓಗಳು!: ಸದ್ಯ ಪಂಚಾಯಿತಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳ ಅವಧಿಗೆ ರಜೆ ಮೇಲೆ ತೆರಳಿದ್ದ ಇಲ್ಲಿನ ಪಿಡಿಓ ಶಿವಲಿಂಗಯ್ಯ ಮತ್ತೆ ಕೆಲಸಕ್ಕೆ ಹಾಜ ರಾಗಿದ್ದಾರೆ. ಇಲ್ಲಿ ಪ್ರಭಾರ ವಹಿಸಿಕೊಂಡಿದ್ದ ಹೊಂಗನೂರು ಪಂಚಾಯಿತಿ ಪಿಡಿಓ ಭಾಗ್ಯ ಲಕ್ಷ್ಮಮ್ಮ ಕೂಡ ರಜೆ ಮೇಲೆ ತೆರಳಿದ್ದ ಶಿವ ಲಿಂಗಯ್ಯಗೆ ಅಧಿಕಾರ ಬಿಟ್ಟು ಕೊಟ್ಟಿಲ್ಲ! ಇಬ್ಬರು ಈ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ! ಆದರೆ, ಇವರು ಪಂಚಾಯಿತಿ ಕಚೇರಿಯಲ್ಲಿ ಜನತೆಗೆ ಕಾಣ ಸಿಗುವುದೇ ಅಪರೂಪವಾಗಿದೆ.
ಅಪರೂಪಕ್ಕೊಮ್ಮೆ ಪಂಚಾಯಿತಿಗೆ ಬರುವ ಪಿಡಿಓ ಶಿವಲಿಂಗಯ್ಯ ಅವರು ಇನ್ನು ತಾವು ಭಾಗ್ಯಲಕ್ಷ್ಮಮ್ಮ ಅವರಿಂದ ಅಧಿಕಾರವನ್ನು ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಉತ್ತರಿಸುತ್ತಾರೆ. ಯಾವುದಾದರೂ ಚೆಕ್ ಅಥವಾ ದಾಖಲೆಗಳಿಗೆ ಸಹಿ ಬೇಕೆಂದರೆ ಜನತೆ ಭಾಗ್ಯಲಕ್ಷ್ಮಮ್ಮ ಕರ್ತವ್ಯ ನಿರ್ವಹಿಸುವ ಹೊಂಗನೂರು ಗಾಪಂ ಅಥವಾ ಚನ್ನಪಟ್ಟಣದಲ್ಲಿ ಅವರು ಹೇಳಿದ ಸ್ಥಳಕ್ಕೆ ಹೋಗಿ ಸಹಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಇನ್ನಾದರೂ ಪಂಚಾಯಿತಿ ಆಡಳಿತ ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನ ನೀಡಬೇಕಿದೆ.
-ಎಂ.ಶಿವಮಾದು