ನವದೆಹಲಿ: ರೈಲ್ವೆಯಲ್ಲಿ ತ್ಯಾಜ್ಯ ವಿಲೇವಾರಿಯೇ ಸವಾಲಿನ ಕೆಲಸ. ಅದಕ್ಕಾಗಿ ಪೂರ್ವ ಕರಾವಳಿ ರೈಲ್ವೆ ದೇಶದಲ್ಲಿಯೇ ಮೊದಲ ಬಾರಿಗೆ ತ್ಯಾಜ್ಯದಿಂದ ಇಂಧನ ಪಡೆಯುವ ಘಟಕವನ್ನು ಶುರು ಮಾಡಿದೆ.
24 ಗಂಟೆಗಳಲ್ಲಿ ಇ- ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ನಿಂದ ಡೀಸೆಲ್ ಮಾದರಿಯ ತೈಲ ತೆಗೆಯಲಾಗುತ್ತಿದೆ. ಪೇಟೆಂಟ್ ಪಡೆಯಲಾಗಿರುವ “ಪಾಲಿಕ್ರಾಕ್’ ಎಂಬ ತಂತ್ರಜ್ಞಾನದಿಂದ ಅದನ್ನು ನಡೆಸಲಾಗುತ್ತಿದೆ. ಭಾರತೀಯ ರೈಲ್ವೆಯಲ್ಲಿ ಇಂಥ ಯೋಜನೆ ಜಾರಿ ಮೊದಲನೆಯದ್ದು ಮತ್ತು ದೇಶದಲ್ಲಿ ಇದು 4ನೇ ಸ್ಥಾವರವಾಗಿದೆ.
ಪೂರ್ವ ಕರಾವಳಿ ರೈಲ್ವೆಯ ವಕ್ತಾರ ಜೆ.ಪಿ.ಮಿಶ್ರಾ ಮಾತನಾಡಿ, ವಿಶ್ವದಲ್ಲಿಯೇ ಮೊದಲ ಬಾರಿಗೆ ವೈವಿಧ್ಯಮಯ ವೇಗವರ್ಧಕ ಪ್ರಕ್ರಿಯೆ ಮೂಲಕ ಹಲವು ವಸ್ತುಗಳನ್ನು ದ್ರವೀಕೃತ ಇಂಧನ, ಅನಿಲ, ಇಂಗಾಲ ಮತ್ತು ನೀರಾಗಿ ಪರಿವರ್ತಿಸುತ್ತದೆ. ಅದಕ್ಕೆ ಪೇಟೆಂಟ್ ಪಡೆಯಲಾಗಿದೆ ಎಂದಿದ್ದಾರೆ. ಅದಕ್ಕಾಗಿ ತ್ಯಾಜ್ಯಗಳನ್ನು ವಿಂಗಡಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಇದರಿಂದಾಗಿ ಧೂಳಿನ ವಾತಾವರಣ ಉಂಟಾಗುವುದಿಲ್ಲ ಮತ್ತು ಪರಿಸರಕ್ಕೆ ಹಾನಿಯಾಗುವ ಅಂಶಗಳು ಹೊರ ಸೂಸುವುದಿಲ್ಲ. ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಈ ಘಟಕ 450 ಡಿಗ್ರಿ ವಾತಾವರಣದಲ್ಲಿ ಕೆಲಸ ಮಾಡುತ್ತದೆ ಎಂದಿದ್ದಾರೆ. ಭುವನೇಶ್ವರ ರೈಲು ನಿಲ್ದಾಣ, ಮಂಚೇಶ್ವರ ದುರಸ್ತಿ ಕಾರ್ಯಾಗಾರ, ಕೋಚಿಂಗ್ ಡಿಪೋಗಳಿಂದ ಸಂಗ್ರಹಿಸಿದ ವಿವಿಧ ಮಾದರಿಯ ತ್ಯಾಜ್ಯಗಳನ್ನು ಅದಕ್ಕೆ ಬಳಸಲಾಗುತ್ತದೆ ಎಂದಿದ್ದಾರೆ.
ವಾರ್ಷಿಕ 17 ಲಕ್ಷ ಆದಾಯ:
ತ್ಯಾಜ್ಯದಿಂದ ಉತ್ಪಾದಿಸುವ ಉತ್ಪನ್ನಗಳಿಂದ ವಾರ್ಷಿಕವಾಗಿ 17.5 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. 2011ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಇನ್ಫೋಸಿಸ್‌ನಲ್ಲಿ ಪ್ರತಿ ದಿನ 50 ಕೆಜಿ ತ್ಯಾಜ್ಯದಿಂದ ಇಂಧನ ಪಡೆಯುವ ಸ್ಥಾವರ ಸ್ಥಾಪಿಸಲಾಯಿತು. ಎರಡನೇಯದ್ದನ್ನು ನವದೆಹಲಿಯ ಮೋತಿ ಭಾಗ್, ಮೂರನೆಯದ್ದನ್ನು 2019ರಲ್ಲಿ ಹಿಂಡಾಲ್ಕೋದಲ್ಲಿ ಶುರು ಮಾಡಲಾಗಿತ್ತು.