Advertisement

ಪರಂ ವಿರುದ ಸಿಎಂ ಗರಂ

10:59 AM Feb 26, 2017 | |

ಬೆಂಗಳೂರು: ನಾಲ್ಕು ವರ್ಷ ಪೂರೈಸಿದ ಹಿರಿಯ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು ಎಂಬ ಪ್ರಸ್ತಾಪದ ಬಗ್ಗೆ ಹಿರಿಯ ಸಚಿವರು ಗರಂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಪ್ರಸ್ತಾಪಕ್ಕೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. 

Advertisement

ಆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೇ “ಹಿರಿಯ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು’ ಎಂಬ ಪ್ರಸ್ತಾಪದ “ಒತ್ತಾಸೆ’ಯಾಗಿ ನಿಂತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮೊಂದಿಗೆ ಚರ್ಚಿಸದೆ ಸಮನ್ವಯ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಮುಂದಾಗಿರುವ ಪರಮೇಶ್ವರ್‌ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 

ಸಮನ್ವಯ ಸಮಿತಿ ಸಭೆಗೂ ಮುನ್ನಾ ದಿನವಾದ ಶನಿವಾರ ಸಂಜೆ ಡಾ.ಪರಮೇಶ್ವರ್‌ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಕಾವೇರಿ ನಿವಾಸಕ್ಕೆ ಆಗಮಿಸಿದಾಗ, ಸಿದ್ದರಾಮಯ್ಯನವರು ಸುಮಾರು 40 ನಿಮಿಷ ಅವರನ್ನು ಕಾಯಿಸುವ ಮೂಲಕ ಹಿರಿಯ ಸಚಿವರನ್ನು ಕೈಬಿಡಬೇಕು ಎಂಬ ಪ್ರಸ್ತಾಪಕ್ಕೆ ಪರೋಕ್ಷವಾಗಿ ಅಸಮಾಧಾನ ತೋರಿದ್ದಾರೆ ಎಂದು ಪಕ್ಷದ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಶನಿವಾರ ಮಧ್ಯಾಹ್ನ 3.10ಕ್ಕೆ ಪರಮೇಶ್ವರ್‌ ಅವರು ಮುಖ್ಯಮಂತ್ರಿ ಅಧಿಕೃತ ನಿವಾಸ “ಕಾವೇರಿ’ಗೆ ಆಗಮಿಸಿದರೂ 3.40ರ ತನಕ ಸಿದ್ದರಾಮಯ್ಯ ಅವರು ಪರಮೇಶ್ವರ್‌ ಅವರನ್ನು ಭೇಟಿ ಮಾಡದೇ ಕಾಯಿಸಿದ್ದರು.40 ನಿಮಿಷಗಳ ನಂತರ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಮುಖ್ಯಮಂತ್ರಿಯವರು, ಸಮನ್ವಯ ಸಮಿತಿ ಸಭೆ ಹಾಗೂ ಡೈರಿ ಪ್ರಕರಣಗಳ ಬಗ್ಗೆ ಚರ್ಚಿಸಿದರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರು, ನಾಲ್ಕು ವರ್ಷ ಪೂರೈಸಿದ ಹಿರಿಯ ಸಚಿವರನ್ನು ಮಂತ್ರಿಮಂಡಲದಿಂದ ಕೈಬಿಟ್ಟು ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದು ಸೂಕ್ತ ಎಂದು ಪರೋಕ್ಷವಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಭಾನುವಾರ ಸಮನ್ವಯ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದರು.

ಈ ಬೆಳವಣಿಗೆ ಗಮನಿಸಿದ ಹಿರಿಯ ಸಚಿವರು, ಪರಮೇಶ್ವರ್‌ ಬಗ್ಗೆ ಮುಖ್ಯಮಂತ್ರಿ ಬಳಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವಿಚಾರ ಕುರಿತಂತೆಯೂ ಮುಖ್ಯಮಂತ್ರಿಯವರು ಪರಮೇಶ್ವರ್‌ ಜೊತೆಗೆ ಚರ್ಚಿಸಿದರು ಎಂದು ಹೇಳಲಾಗಿದೆ. ಹಿರಿಯ ಸಚಿವರನ್ನು ಕೈಬಿಡುವ ಪ್ರಸ್ತಾಪ ಈಗ ಮುಖ್ಯಮಂತ್ರಿ ಹಾಗೂ ಪರಮೇಶ್ವರ್‌ ನಡುವೆ ಹೊಸದಾದ ಭಿನ್ನಮತ ಸೃಷ್ಟಿಸಿದೆ. ಮುಖ್ಯಮಂತ್ರಿ ಬಳಿ ಹಾಗೂ ಪಕ್ಷದ ಒಳಗಡೆ ತಮ್ಮನ್ನು ಮಂತ್ರಿಮಂಡಲದಿಂದ ಕೈಬಿಡುವ ಪ್ರಸ್ತಾಪದ ಬಗ್ಗೆ ಅಸಮಾಧಾನ ಹೊರಹಾಕಿರುವ ಹಿರಿಯ ಸಚಿವರು, ಪಕ್ಷ ಹಾಗೂ ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾನು ಬಾರಿ ಶಾಸಕನಾಗಿ, 4 ಬಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಹಿರಿಯ ಸಚಿವರನ್ನು ಕೈಬಿಡುವ ಕುರಿತಂತೆ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ಹೇಳಿದ್ದಾರೆ.

Advertisement

ಈ ಮಧ್ಯೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಿರಿಯ ಸಚಿವರನ್ನು ಕೈಬಿಡುವ ಪ್ರಸ್ತಾಪ ಸಮನ್ವಯ ಸಮಿತಿ ಸಭೆಯ ಅಜೆಂಡಾದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next