Advertisement

ಸಿಎಂ ರೈತ ವಿರೋಧಿ ಹೇಳಿಕೆಗೆ ಗರಂ

12:35 PM Nov 22, 2018 | |

ರಾಯಚೂರು: ಕಬ್ಬು ಬೆಳೆ ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ರೈತರು ಹಾಗೂ ರೈತ ಮಹಿಳೆ ಬಗ್ಗೆ ತುತ್ಛವಾಗಿ ಮಾತನಾಡಿದ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಬುಧವಾರ ಧರಣಿ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರ ರೈತ ವಿರೋಧಿ ಯಾಗಿದೆ. ಕಬ್ಬು ಬೆಳೆಗಾರರು ತಮ್ಮ ಹಕ್ಕುಗಳಿಗಾಗಿ ನ್ಯಾಯಯುತವಾಗಿ ಹೋರಾಟಕ್ಕೆ ಮುಂದಾದರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ರಾಜ್ಯ ಬರಕ್ಕೆ ತುತ್ತಾಗಿದ್ದು, ರೈತರು ಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಇತ್ಯರ್ಥಪಡಿಸಲು ಚಿಂತಿಸದ ಸಿಎಂ, ರೈತರ ಬಗ್ಗೆಯೇ ಮನಬಂದಂತೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ, ಅದೇ ರೈತರು ಕಷ್ಟ ಎಂದು ಬಂದಾಗ ಕಡೆಗಣಿಸುತ್ತಿದ್ದಾರೆ. ಅವರು ಮೊದಲು ರೈತರ ಹಿತ ಕಾಪಾಡಲು ಮುಂದಾಗಬೇಕು. ಸಾಲ ಮನ್ನಾ ಎಂದರೂ ಬ್ಯಾಂಕ್‌ನವರು ರೈತರ ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ. ಈ ಕೂಡಲೇ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜ್ಯದ ರೈತರ ಕ್ಷಮೆಯಾಚಿಸಬೇಕು. ಕಬ್ಬು ಬೆಳಗಾರರಿಗೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು. ಬರ ಪರಿಹಾರ ಕಾಮಗಾರಿ ತ್ವರಿತವಾಗಿ ಆರಂಭಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಮುಖಂಡರಾದ ಎನ್‌.ಶಂಕ್ರಪ್ಪ, ತಿಪ್ಪರಾಜ ಹವಾಲ್ದಾರ್‌, ಆರ್‌.ತಿಮ್ಮಯ್ಯ, ಅಶೋಕ ಗಸ್ತಿ, ಬಂಡೇಶ ವಲ್ಕಂದಿನ್ನಿ, ಪರಮೇಶಪ್ಪ, ಎ.ಚಂದ್ರಶೇಖರ, ಶಶಿರಾಜ ಮಸ್ಕಿ ಸೇರಿ ವಿವಿಧ ಕಾರ್ಯಕರ್ತರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next