ನವದೆಹಲಿ:ಕೋವಿಶೀಲ್ಡ್ ಎರಡು ಡೋಸ್ ಗಳನ್ನು ಪಡೆಯುವ ನಡುವಿನ ಅಂತರವನ್ನು ವೈಜ್ಞಾನಿಕ ಪುರಾವೆ ಆಧರಿಸಿ ಪಾರದರ್ಶಕ ಮಾನದಂಡದ ಮೂಲಕ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಸಮಿತಿ ಬುಧವಾರ(ಜೂ.16) ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ
ಕೋವಿಶೀಲ್ಡ್ ಲಸಿಕೆಯ ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಳಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲವಾಗಿತ್ತು ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು ವಿಜ್ಞಾನಿಗಳು ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳ ಬದಲಾಗಿ 12-16 ವಾರಗಳಿಗೆ ವಿಸ್ತರಿಸಿ ಮೇ 13ರಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿತ್ತು. ಲಭ್ಯವಿರುವ ನೈಜ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅದರಲ್ಲೂ ಮುಖ್ಯವಾಗಿ ಬ್ರಿಟನ್ ನ ಕೋವಿಡ್ 19 ವರ್ಕಿಂಗ್ ಗ್ರೂಪ್ ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು 12ರಿಂದ 16 ವಾರಗಳವರೆಗೆ ಹೆಚ್ಚಿಸಲು ಒಪ್ಪಿಗೆ ಸೂಚಿಸಿತ್ತು.
ಆದರೆ ಕೋವ್ಯಾಕ್ಸಿನ್ ಲಸಿಕೆಯ ಡೋಸ್ ಗಳ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆಗೆ ಶಿಫಾರಸು ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ವಿವರಿಸಿದೆ.
ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವ ಶಿಫಾರಸು ಮಾಡಲು ಸಾಕಷ್ಟು ಪುರಾವೆ ಸಲಹಾ ಸಮಿತಿ ಬಳಿ ಇರಲಿಲ್ಲ ಎಂದು ಸಮಿತಿಯ 14 ಸದಸ್ಯರ ಪೈಕಿ ಮೂವರು ವಿಜ್ಞಾನಿಗಳು ಹೇಳಿಕೆ ನೀಡಿದ್ದರು.