ಬೆಂಗಳೂರು: ಶಾಸಕ ಗುರುರಾಜ್ ಗಂಟಿಹೊಳೆ ಅವರು ಮರವಂತೆ ಬೀಚ್ ಅಭಿವೃದ್ಧಿಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆದರು.
ಪ್ರಧಾನಿಯವರ ಲಕ್ಷ ದ್ವೀಪ ಭೇಟಿಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತು. ಬಹುತೇಕ ರಾಜ್ಯಗಳು ಈ ಅವಕಾಶವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿದೆ. ಆದರೆ ಕರ್ನಾಟಕ ಈ ಬಗ್ಗೆ ಉದಾಸೀನತೆ ತೋರಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯ ವೈಖರಿಗೆ ಆಕ್ಷೇಪಿಸಿದರು.
ಕೆಲವು ಕಾನೂನು ಅಡಚಣೆಗಳು ಬೀಚ್ ಪ್ರವಾಸೋ ದ್ಯಮಕ್ಕೆ ಅಡ್ಡಿ ಮಾಡುತ್ತಿವೆ. ಕಡಲ ಕಿನಾರೆಯ ಪ್ರವಾಸೋದ್ಯಮಕ್ಕೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.
ಅಭಿವೃದ್ಧಿಗೆ ಕಂಟಕ ವಾಗಿರುವ ಸಿಆರ್‌ಝೆಡ್ ನಿಯಮಗಳನ್ನು ರಾಜ್ಯದಲ್ಲಿ ಸರಳಗೊಳಿಸಬೇಕು. ಮರವಂತೆಯಲ್ಲಿ ವಿವಿಧ ಯೋಜನೆಗಳು ಸಿಆರ್‌ಝೆಡ್ ಕಾರಣದಿಂದ ಸ್ಥಗಿತಗೊಂ ಡಿವೆ ಎಂದ ಅವರು, ಸಿಆರ್‌ಝಡ್ ಕಚೇರಿಯನ್ನು ಕರಾವಳಿ ಭಾಗಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಮರವಂತೆ ಅಭಿವೃದ್ಧಿಗೆ ತೊಡಕಾಗಿರುವ ಅಂಶಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವರ ಪರವಾಗಿ ಸಚಿವ ಕೃಷ್ಣ ಬೈರೇಗೌಡರು ತಿಳಿಸಿದರು.