Advertisement

ಶೂನ್ಯಮಾಲಿನ್ಯದಲ್ಲಿ ಗಣಪತಿ ಪೂಜೆ!

08:20 AM Aug 23, 2017 | Team Udayavani |

ಗಣಪತಿ ಅನ್ನುವುದೇ ವಿಶಿಷ್ಟ ಕಲ್ಪನೆ. ಬಹುಭಾಗ ಮನುಷ್ಯಾಕೃತಿ, ಶಿರಭಾಗ ಗಜಾಕೃತಿ. ಇಂತಹುದೇ ಇನ್ನೊಂದು ರೂಪ ತೋರುವುದು ನರಸಿಂಹನಲ್ಲಿ. ಅಲ್ಲಿ ಬಹುಭಾಗ ಮನುಷ್ಯಾಕೃತಿ, ಶಿರಭಾಗ ಸಿಂಹಾಕೃತಿ. 

Advertisement

ವಿದ್ವಾಂಸರು, ಚಿಂತಕರು ಗಣಪತಿ ಬಹು ಚಿಂತನೆಗಳ ಸಂಕೇತವಾಗಿದ್ದಾನೆ ಎನ್ನುತ್ತಾರೆ. ದೊಡ್ಡ ತಲೆಯು ವಿಶಾಲ ದೃಷ್ಟಿಯಿಂದ ಆಲೋಚನೆ ಮಾಡು ಎನ್ನುವುದರ ಸಂಕೇತ. ಜೀವನಾನುಭವ ಇರುವವರೆಲ್ಲ ತಮ್ಮಲ್ಲಿ ಒಂದಿಷ್ಟು ಉತ್ತಮ ಮತ್ತು ಒಂದಿಷ್ಟು ಕೆಟ್ಟ ಘಟನೆ, ಅನುಭವಗಳನ್ನು ಕಂಡಿರುತ್ತಾರೆ. ಇದೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕೆನ್ನುವುದು ದೊಡ್ಡ ಹೊಟ್ಟೆಯ ಸಂಕೇತ. ಸಣ್ಣ ಕಾಲುಗಳು ಸಹಿಷ್ಣುತೆಯ ಸಂಕೇತ. ನಾವೆಲ್ಲರೂ ಭಾರ ಹೊರಲು ತಯಾರಿರದೆ ಕೀರ್ತಿ ಹೊರಲು ಸದಾ ಸಿದ್ಧರಿರುವ ಮನಃಸ್ಥಿತಿಯವರು. ಇವರಿಗೆಲ್ಲ “ಭಾರ ಹೊರುವುದನ್ನು ಕಲಿಯಿರಿ’ ಎಂದು ಗಣಪತಿ ಹೇಳುತ್ತಾನೆ. ಒಂದರ್ಥದಲ್ಲಿ ಭಾರ+ತವನ್ನೇ ಹೊರಬೇಕಾದ ನಾವು ನಮ್ಮ ಭಾರವನ್ನಾದರೂ ಹೊರಬೇಕಲ್ಲ? ಇದು ಮನೆ ವ್ಯವಹಾರ, ಉದ್ಯೋಗ ವ್ಯವಹಾರಗಳಲ್ಲಿ ಬಹಳ ಮುಖ್ಯ. ಭಾರ ಬಂದಾಕ್ಷಣ ಇನ್ನೊಬ್ಬರ ಹೆಗಲ ಮೇಲೆ ಹೊತ್ತು ಹಾಕಿ ಕೀರ್ತಿ ಬರುತ್ತದೆನ್ನುವಾಗ ತಮ್ಮ ಹೆಗಲ ಮೇಲೆ ಹಾಕಿಕೊಂಡು ಓಡಾಡುವವರಿಗೆ ಇದು ಪಾಠ. 

ದೊಡ್ಡ ಕಿವಿಯು ಆಲಿಸುವುದನ್ನು, ಕೆಟ್ಟ ಮಾತುಗಳನ್ನು ಝಾಡಿಸಿ ಬಿಡುವುದನ್ನು ಸಂಕೇತಿಸುತ್ತದೆ. ನಾವು ಇದಕ್ಕೆ ಸದಾ ವಿರುದ್ಧವಿರುತ್ತೇವೆ. ಕೆಟ್ಟ ಮಾತುಗಳನ್ನು ಕೇಳಿಸಿಕೊಂಡು ಅದನ್ನೇ “ಜಗಿಯುತ್ತ’, ಇನ್ನೊಬ್ಬರ ಮಾತುಗಳನ್ನು ಆಲಿಸಲು ಅಸಹಿಷ್ಣುರಾಗಿರುತ್ತೇವೆ. ಯೋಗ್ಯ ಮನುಷ್ಯರೆನಿಸಬೇಕಾದರೆ ಇನ್ನೊಬ್ಬರ ಸಮಸ್ಯೆಗಳನ್ನು ಆಲಿಸುವ ಗುಣ ಇರಬೇಕು. ಸಣ್ಣ ಕಣ್ಣು ಉನ್ನತ ಮಟ್ಟದ ಏಕಾಗ್ರತೆ, ಸೂಕ್ಷ್ಮತೆಯನ್ನು ಸೂಚಿಸುತ್ತದೆ. ವಾಹನ ಇಲಿಯು ನಮ್ಮ ಕಾಮನೆಗಳನ್ನು (ಬೇಡಿಕೆಗಳು) ನಿಯಂತ್ರಿಸುವ ಸಂಕೇತವಾದರೆ ಅಗಲವಾದ ಹಣೆ ಉನ್ನತ ಮಟ್ಟದ ಚಿಂತನೆಯನ್ನು ಸೂಚಿಸುತ್ತದೆ. ಏಕದಂತವು ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಬಿಟ್ಟುಬಿಡುವ, ದೊಡ್ಡ ಸೊಂಡಿಲು ದಕ್ಷತೆ ಮತ್ತು ಸ್ವೀಕೃತಿ ಮನೋಭಾವನೆಯನ್ನು ಸೂಚಿಸುತ್ತಿದೆ. 

ಗಣಪತಿಯ ಈ ಗುಣಗಳನ್ನು ಆತನ ಆರಾಧನೆ ವೇಳೆ ಚಿಂತನೆ ನಡೆಸಿದರೆ ಪರಿಪೂರ್ಣ ಮನುಷ್ಯರಾಗುವತ್ತ ಹೆಜ್ಜೆ ಹಾಕಬಹುದು. ಇಂದು ಗಣೇಶನ ಹೆಸರಿನಲ್ಲಿ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕೂಗು ಕೇಳುತ್ತಿರುವಾಗ ಇದು ಶೂನ್ಯಮಾಲಿನ್ಯದಲ್ಲಿ ಗಣಪತಿಯ ಚಿಂತನೆ (ಪೂಜೆ) ಮಾಡಬಹುದೆಂಬ ಆಶಾವಾದ ಮೂಡುತ್ತಿದೆ. 

-  ಸ್ವಾಮಿ

Advertisement
Advertisement

Udayavani is now on Telegram. Click here to join our channel and stay updated with the latest news.

Next