ಬೆಂಗಳೂರು: ಆಂಧ್ರಪ್ರದೇಶದ ವಿಶಾಖಪಟ್ಟಣ ನಿಂದ ಕೆ.ಜಿ.ಗೆ 8 ಸಾವಿರ ರೂ.ಗೆ ಗಾಂಜಾ ಖರೀದಿಸಿ ಓಮ್ನಿಯಲ್ಲಿ ಬೆಂಗಳೂರಿಗೆ ತಂದು 30 ರಿಂದ 50 ಸಾವಿರ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಬಾಣಸವಾಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೇರಳದ ಪನಯಾಂಪದಂ ನಿವಾಸಿ ಅನಂತು (29) ಮತ್ತು ನಂದಿಪುಲಂನ ಬಾಬು (40) ಬಂಧಿ ತರು. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 1 ಕ್ವಿಂಟಲ್ ಗಾಂಜಾ ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಗುಡ್ಡಗಾಡು ಪ್ರದೇಶಗಳಿಗೆ ತೆರಳಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು. 1 ಕೆ.ಜಿ. ಗಾಂಜಾಕ್ಕೆ 8 ಸಾವಿರ ರೂ.ನಂತೆ 1 ಕ್ವಿಂಟಲ್ ಗೆ ತಗುಲುವ ದುಡ್ಡನ್ನು ಓಮ್ನಿಯಲ್ಲಿ ಇಟ್ಟು ಅಲ್ಲಿನ ಸ್ಥಳೀಯ ಡೀಲರ್‌ಗಳಿಗೆ ಕರೆ ಮಾಡಿ ಮಾಹಿತಿ ನೀಡಿ ಅಲ್ಲಿಂದ ತೆರಳುತ್ತಿದ್ದರು. ಸ್ಥಳೀಯ ಡೀಲರ್‌ಗಳು ಓಮ್ನಿಯಲ್ಲಿದ್ದ ಹಣ ತೆಗೆದುಕೊಂಡು ಅದಕ್ಕೆ ಸಮಾನಾದ ಗಾಂಜಾವನ್ನು ವಾಹನದಲ್ಲಿ ತುಂಬಿ ತೆರಳುತ್ತಿದ್ದರು. ಡೀಲ್ ಕುದುರಿದ ಬಳಿಕ ಸ್ಥಳೀಯ ಡೀಲರ್‌ಗಳು ಆರೋಪಿಗಳ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಮರುದಿನ ಆರೋಪಿಗಳು ತಾವು ವಾಹನ ಇಟ್ಟ ಪ್ರದೇಶಕ್ಕೆ ಬಂದು ಗಾಂಜಾ ಸಮೇತ ಓಮ್ನಿಯಲ್ಲಿ ನಗರಕ್ಕೆ ವಾಪಸ್ಸಾಗಿದ್ದರು. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೆ.ಜಿಗೆ 30 ರಿಂದ 50 ಸಾವಿರ ರೂ.ಗೆ ಮಾರಾಟ ಮಾಡಲು ಮುಂದಾಗಿದ್ದರು. ಎಚ್‌ಆರ್‌ಬಿಆರ್ ಲೇಔಟ್, 1ನೆ ಬ್ಲಾಕ್‌ನ ಖಾಲಿ ನಿವೇಶನದ ಬಳಿ ಆರೋಪಿಗಳು ಓಮ್ನಿ ವಾಹನ ನಿಲ್ಲಿಸಿಕೊಂಡು ಅದರಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಬಗ್ಗೆ ಬಾಣಸವಾಡಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಗಾಂಜಾ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಆರೋಪಿ : ಆರೋಪಿ ಅನಂತು 2016ರಲ್ಲಿ ಪಾಲಕ್ಕಾಡ್ ಜಿಲ್ಲೆಯ ಕೋಲಂಕೋಡ್ ಅಬಕಾರಿ ಠಾಣೆಯಲ್ಲಿ ದಾಖಲಾದ ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ. ಕಾಲೇಜು ವಿದ್ಯಾರ್ಥಿಗಳು, ಟೆಕಿಗಳು ಹಾಗೂ ಉತ್ತರ ಭಾರತ ಮೂಲದ ಉದ್ಯೋಗಿಗಳು ಹಾಗೂ ನಗರದಲ್ಲಿರುವ ಗಾಂಜಾ ಪೆಡ್ಲರ್ ಗಳೇ ಇವರ ಗಿರಾಕಿಗಳಾಗಿದ್ದರು. ಈ ಹಿಂದೆ ಆರೋಪಿಗಳು ಗಾಂಜಾ ಮಾರಾಟ ಮಾಡಿದ್ದರೇ ಎಂಬ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ.