ಬೆಂಗಳೂರು: ನೇಪಾಳ ಮೂಲದ ಯುವಕನನ್ನು ಕೊಲೆ ಮಾಡಿದ್ದ ಪ್ರಕರಣ ಭೇದಿಸಿರುವ ವಿ.ವಿ.ಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನೇಪಾಳ ಮೂಲದ ರಮೇಶ್ ಕೊಲೆಯಾಗಿದ್ದವರು. ತಮಿಳು ನಾಡು ಮೂಲದ ಶ್ರೀನಿವಾಸ್, ಸತೀಶ್ ಬಂಧಿತರು.
ಇಬ್ಬರು ಆರೋಪಿಗಳು ತರಗುಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ರಮೇಶ್ ಮಾವ ರತನ್ ತೋಟಗಳಿಗೆ ಗ್ರೀನ್ ಮೆಸ್ ಹಾಕುವ ಬಿಸಿನೆಸ್ ಮಾಡಿಕೊಂಡಿದ್ದ. ಆತನ ಬಳಿಯೇ ರಮೇಶ್ ಕೆಲಸ ಮಾಡುತ್ತಿದ್ದ. ಮಾ.27ರಂದು ಸ್ನೇಹಿತ ಇಂದ್ರೇಶ್ ನೊಂದಿಗೆ ಮೆಟಿರಿಯಲ್ ತರಲು ಬಂದಿದ್ದ. ಕೆಲಸ ಮುಗಿಸಿ ಇಬ್ಬರೂ ಮದ್ಯಪಾನ ಮಾಡಲು ನ್ಯೂ ತರಗುಪೇಟೆಯಲ್ಲಿರುವ ಬಾರ್ ಗೆ ತೆರಳಿದ್ದರು.
ಬಾರ್‌ನಲ್ಲಿ ಕುಡಿಯುತ್ತಿದ್ದಾಗ ಅದೇ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರು ಆರೋಪಿಗಳು ಗಾಂಜಾ ಸೇವಿಸುವುದನ್ನು ರಮೇಶ್ ನೋಡಿದ್ದ. ಅವರ ಬಳಿ ಗಾಂಜಾ ಇರಬಹುದು ಎಂದುಕೊಂಡು ರಮೇಶ್ ಸ್ನೇಹಿತನ ಜತೆಗೆ ಅವರನ್ನು ಹಿಂಬಲಿಸಿಕೊಂಡು ಹೋಗಿದ್ದ. 500 ರೂ. ಕೊಡುತ್ತೇವೆ ಗಾಂಜಾ ಕೊಡಿ ಎಂದು ಕೇಳಿದ್ದ. ಗಾಂಜಾ ಇಲ್ಲ ಎಂದು ಆರೋಪಿಗಳು ಹೇಳಿದ್ದರೂ ಕೇಳದ ರಮೇಶ್ ಅವರನ್ನು ಪದೆ-ಪದೆ ಪೀಡಿಸಿದ್ದ. ನಶೆಯಲ್ಲಿದ್ದ ಆರೋಪಿಗಳು ಆಕ್ರೋಶಗೊಂಡು ಬಿಯರ್ ಬಾಟಲ್ ಒಡೆದು ರಮೇಶ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದರು.
ಇತ್ತ ರಮೇಶ್ ಜೊತೆಗಿದ್ದ ಇಂದ್ರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೃತ್ಯ ನಡೆದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.