ಬೀಳಗಿ: ವೈಯಕ್ತಿಕ ಅಭಿಪ್ರಾಯ, ವಿಚಾರ ಮತ್ತು ರಾಜಕೀಯ ಜೀವನ ಏನೇ ಇರಲಿ ಅದು ಸಮಾಜದಿಂದ ಹೊರಗಿರಬೇಕು. ಸಮಾಜದ ಹಿತ ಕಾಪಾಡುವ ಕೆಲಸದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಒಂದಾಗಬೇಕು ಎಂದು ಗಾಣಿಗ ಸಮಾಜದ ಯುವ ಮುಖಂಡ ಬಸವಪ್ರಭು ಸರನಾಡಗೌಡ ಹೇಳಿದರು.
ತಾಲೂಕು ಗಾಣಿಗ ಸಮಾಜ ಹಾಗೂ ಯುವ ಘಟಕ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಸಂಘಟನೆ ಮಾಡುವುದರ ಜತೆಗೆ ಅನ್ಯ ಸಮಾಜಗಳಗಳನ್ನು ಗೌರವದಿಂದ, ಪ್ರೀತಿಯಿಂದ ಕಾಣುವ ಸದ್ಗುಣ ರೂಢಿಸಿಕೊಳ್ಳಬೇಕು.
ಗಾಣಿಗ ಸಮಾಜದ ಜನ ಶೈಕಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಕಾಣಬೇಕಿದೆ. ಆದಕಾರಣ, ಪ್ರತಿ ವರ್ಷವೂ ಸಮಾಜದ ಉತ್ತಮ ಸಾಧಕರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಪ್ರೋತ್ಸಾಹಿಸಿ ಗೌರವಿಸಲು ಇಂತಹ ವೇದಿಕೆಗಳ ಅವಶ್ಯಕತೆಯಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕತೆಯಿಂದ ಸದೃಢವಿದ್ದರೆ ರಾಜಕೀಯ ಮತ್ತು ಇತರೆ ಕ್ಷೇತ್ರಗಳಲ್ಲಿಯೂ ಕೂಡ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಗಾಣಿಗ ಸಮಾಜದಲ್ಲಿ ಆರ್ಥಿಕತೆಯಿಂದ ಬಲಾಡ್ಯ ಇದ್ದವರು ಇಂತಹ ಕಾರ್ಯಕ್ರಮಗಳಿಗೆ ಪ್ರಾಯೋಜಕರಾದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೋಲಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಮನ್ನಿಕೇರಿ ದಿಗಂಬರೇಶ್ವರ ಮಠದ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಪ್ರಕಾಶ ಅಂತರಗೊಂಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಅಶೋಕ ಲಾಗಲೂಟಿ, ವಿಠ್ಠಲ ಬಾಗೇವಾಡಿ, ಹನುಮಂತ ಸೂಳಿಕೇರಿ, ರಾಮಣ್ಣ ಕಾಳಪ್ಪಗೋಳ, ಪಿ.ಎಂ. ಹುಗ್ಗಿ, ಮಲ್ಲಪ್ಪ ಕಟಗೇರಿ, ದಾಕ್ಷಾಯಿಣಿ ಜಂಬಗಿ, ಶೋಭಾ ಬಗಲಿ, ವಿದ್ಯಾ ಬಾವಿ, ಚಂದ್ರು ಕಾಖಂಡಕಿ, ಲಕ್ಷ್ಮಣ ಚಿಣ್ಣನ್ನವರ, ಕವಿತಾ ಏಳೆಮ್ಮಿ, ಸಂತೋಷ ಏಳೆಮ್ಮಿ, ರಮೇಶ ಗಾಣಿಗೇರ, ಬಸವರಾಜ ಬಗಲಿ, ಎಸ್.ಎಂ. ಬಾವಿ, ಈರಣ್ಣ ತೋಳಮಟ್ಟಿ, ಗುರುಪಾದ ಬಗಲಿ, ಮಲ್ಲು ಜಲಗೇರಿ ಇತರರು ಇದ್ದರು.