Advertisement

ರೌಡಿಗಳ ಗ್ಯಾಂಗ್‌ವಾರ್‌ ಪ್ರಕರಣ; ಮಾದಕ ವ್ಯಸನ ಪೂರೈಕೆ ತಡೆಗೆ ಬೇಕಿದೆ ವಿಶೇಷ ನಿಗಾ

12:51 AM Jun 02, 2024 | Team Udayavani |

ಉಡುಪಿ: ಕುಂಜಿಬೆಟ್ಟಿನಲ್ಲಿ ನಡೆದ ರೌಡಿಗಳ ಗ್ಯಾಂಗ್‌ವಾರ್‌ ಘಟನೆಯ ಬಗ್ಗೆ ಪೊಲೀಸ್‌ ಇಲಾಖೆ ಮಣಿಪಾಲ ಭಾಗದಲ್ಲಿ ಗಸ್ತು ಕಾರ್ಯಾಚರಣೆಯನ್ನು ಹೆಚ್ಚಿಸಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Advertisement

ಈ ನಡುವೆ ಶಾಲಾ- ಕಾಲೇಜುಗಳೂ ಆರಂಭಗೊಂಡಿದ್ದು, ಮಾದಕ ವ್ಯಸನದ ಕೇಂದ್ರ ಬಿಂದುಗಳಾದ ಸಣ್ಣಪುಟ್ಟ ಅಂಗಡಿಗಳ ಮೇಲೂ ವಿಶೇಷ ನಿಗಾ ಇರಿಸುವ ಅಗತ್ಯ ಎದುರಾಗಿದೆ.

ಮುಖ್ಯವಾಗಿ ಕೊರಿಯರ್‌ ಹಾಗೂ ಬಸ್‌ಗಳ ಮೂಲಕ ಮುಂಜಾನೆ ಪಾರ್ಸೆಲ್‌ನಲ್ಲಿ ಆಗಮಿಸುವ ವಸ್ತುಗಳ ಜತೆ ಬರಬಹುದಾದ ಮಾದಕ ವಸ್ತು, ಇತರ ವಾಹನಗಳ ಮೂಲಕ, ರೈಲು ಮಾರ್ಗದ ಮೂಲಕ ಜಿಲ್ಲೆಗೆ ಸುಲಭದಲ್ಲಿ ಮಾದಕ ವಸ್ತುಗಳ ಬಗ್ಗೆಯೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಕೆಲವೊಂದು ಪಾನ್‌ಬೀಡಾ ಅಂಗಡಿಗಳು, ಸಣ್ಣಪುಟ್ಟ ಅಂಗಡಿಗಳು, ಕೊರಿಯರ್‌ ಸಿಬಂದಿ ಮೂಲಕ ಸಂಬಂಧಪಟ್ಟವರ ಕೈಗೆ ಮಾದಕ ವಸ್ತುಗಳು ಸುಲಭದಲ್ಲಿ ಸಿಗುವಂತಾಗಿದೆ. ವರ್ಷದ ಹಿಂದೆ ಮಂಗಳೂರಿನಲ್ಲಿ ಡಾರ್ಕ್‌ವೆಬ್‌ ಮೂಲಕವೂ ಮಾದಕ ವಸ್ತುಗಳು ಸರಬರಾಜಾಗುತ್ತಿದ್ದು, ಮಣಿಪಾಲದಲ್ಲಿ ಹಲವಾರು ಮಂದಿ ವಿದ್ಯಾರ್ಥಿಗಳು ಇದರ ದಾಸರಾಗಿದ್ದರು. ಅನಂತರ ಇದು ನಿಯಂತ್ರಣಕ್ಕೆ ಬಂತಾದರೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಜಾಲ ಇನ್ನೊಂದು ರೀತಿಯಲ್ಲಿ ಸಕ್ರಿಯವಾದಂತಿದೆ.

ರಾತ್ರಿ 10ರ ಬಳಿಕ ಬಂದ್‌ ಕಟ್ಟುನಿಟ್ಟು
ಮಣಿಪಾಲದಾದ್ಯಂತ ರಾತ್ರಿ 10 ಗಂಟೆ ವೇಳೆಗೆ ಪೊಲೀಸರು ಗಸ್ತು ವಾಹನ ಹಾಗೂ ದ್ವಿಚಕ್ರ ವಾಹನಗಳ ಮೂಲಕ ತೆರಳಿ ಅಂಗಡಿ, ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡಿಸುತ್ತಿದ್ದಾರೆ. ಈ ಕಾರಣದಿಂದ ಕಳೆದ ಕೆಲವು ದಿನಗಳಿಂದ ಮಣಿಪಾಲ ಠಾಣೆಯಲ್ಲಿ ಯಾವುದೇ ಗಾಂಜಾ ಸೇವನೆ ಪ್ರಕರಣಗಳು ಹಾಗೂ ಅನೈತಿಕ ಚಟುವಟಿಕೆ ಪ್ರಕರಣಗಳು ವರದಿಯಾಗಿಲ್ಲ.

Advertisement

ಜಾಗೃತಿ ಕಾರ್ಯಕ್ರಮ
ಶಾಲಾ- ಕಾಲೇಜುಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಡ್ರಗ್‌ ಪೆಡ್ಲರ್‌ಗಳಾಗಿದ್ದವರ ಹಾಗೂ ಖರೀದಿಸಿದ್ದವರ ವಿವರ ಪಡೆದು ಅವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡುವ ಕಾರ್ಯವೂ ನಡೆಯುತ್ತಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ಮಣಿಪಾಲ ವ್ಯಾಪ್ತಿಯಲ್ಲಿ ರಾತ್ರಿ 10ರ ಬಳಿಕ ಗಸ್ತು ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ. ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ.
-ದೇವರಾಜ್‌ ಟಿ.ವಿ., ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ

 

Advertisement

Udayavani is now on Telegram. Click here to join our channel and stay updated with the latest news.

Next