ಚೆನ್ನೈ: ಕರಾಚಿಯಲ್ಲಿ ಠಿಕಾಣಿ ಹೂಡಿರುವ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೌದು ಅದೇ ರೀತಿ ಗ್ಯಾಂಗ್ ಸ್ಟರ್ ಶ್ರೀಧರ್ ಧನಪಾಲನ್ ಎಂಬಾತ ದಕ್ಷಿಣದ ದಾವೂದ್ ಇಬ್ರಾಹಿಂ ಎಂದೇ ಹೆಸರುವಾಸಿಯಾಗಿದ್ದ. ಕೌಟುಂಬಿಕ ಕಾರಣಗಳಿಂದಾಗಿ ಶ್ರೀಧರ್ ಕಾಂಬೋಡಿಯಾದಲ್ಲಿ ಸೈನೆಡ್ ತಿಂದು ಆತ್ಮಹತ್ಯೆಗೆ ಶರಣಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
44ರ ಹರೆಯದ ಧನಪಾಲನ್ ಕೌಟುಂಬಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದು, ಕೂಡಲೇ ಆತನನ್ನು ಕಾಂಬೋಡಿಯಾದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಧನಪಾಲನ್ ಸಾವಿನ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ತಮಿಳುನಾಡಿನ ಕಾಂಚೀಪುರಂನಲ್ಲಿನ ಎಲ್ಲಿಯಪ್ಪನ್ ಸ್ಟ್ರೀಟ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನೆಲೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಂಚೀಪುರಂನ ಎಲ್ಲಿಯಪ್ಪನ್ ಸ್ಟ್ರೀಟ್ ನಲ್ಲಿ ಧನಪಾಲನ್ ಮನೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಏಳು ಕೊಲೆ ಸೇರಿದಂತೆ 43 ಪ್ರಕರಣಗಳು ಗ್ಯಾಂಗ್ ಸ್ಟರ್ ಶ್ರೀಧರ್ ಧನಪಾಲನ್ ವಿರುದ್ಧ ದಾಖಲಾಗಿದ್ದವು. ಈತ 2013ರಲ್ಲಿ ಕಾಂಬೋಡಿಯಾಕ್ಕೆ ಪರಾರಿಯಾಗಿದ್ದ. ಆತನನ್ನು ಪತ್ತೆಹಚ್ಚುವಲ್ಲಿ ತಮಿಳುನಾಡು ಪೊಲೀಸರು ವಿಫಲರಾಗಿದ್ದರು. ಈತನನ್ನು ದಕ್ಷಿಣದ ದಾವೂದ್ ಇಬ್ರಾಹಿಂ ಎಂದೇ ಹೇಳಲಾಗುತ್ತಿದೆ ಎಂದು ತಮಿಳುನಾಡು ಪೊಲೀಸರು ವಿವರಿಸಿದ್ದಾರೆ.
ಕೆಲವು ತಿಂಗಳಿನಿಂದ ಕಾಂಬೋಡಿಯಾದಲ್ಲಿ ಧನಪಾಲನ್ ಒಬ್ಬಂಟಿಯಾಗಿ ನೆಲೆಸಿದ್ದ. ಆತನ ಮಗಳು ಮತ್ತು ಪತ್ನಿ ಕಾಂಚೀಪುರಂನ ನಿವಾಸದಲ್ಲಿ ವಾಸವಾಗಿದ್ದಾರೆ. ಧನಪಾಲನ್ ಮಗ ಲಂಡನ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವುದಾಗಿ ವರದಿ ಹೇಳಿದೆ.