Advertisement

ಗಂಗೊಳ್ಳಿ: ತ್ಯಾಜ್ಯ ವಿಲೇವಾರಿಯೇ ದೊಡ್ಡ ಸವಾಲು

12:50 AM Jan 23, 2019 | Team Udayavani |

ಗಂಗೊಳ್ಳಿ: ಬಂದರು ನಗರಿ, ಅತ್ಯಂತ ಜನನಿಬಿಡ ಹಾಗೂ ಅತೀ ದೊಡ್ಡ ಗ್ರಾ.ಪಂ.ಗಳಲ್ಲಿ ಒಂದಾದ ಗಂಗೊಳ್ಳಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆರಂಭವಾದರೂ ಕಸ ವಿಲೇವಾರಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಹೆಚ್ಚಿನ ಜನ ಗಂಗೊಳ್ಳಿಯ ಮುಖ್ಯ ರಸ್ತೆ ಸಹಿತ ಹಲವೆಡೆಯ ರಸ್ತೆ ಬದಿಗಳಲ್ಲಿ ಕಸ ಎಸೆಯುತ್ತಿದ್ದಾರೆ. 

Advertisement

ಕೆರೆಗೂ ಹಾಕ್ತಾರೆ ಕಸ!
ಬೆಳೆಯುತ್ತಿರುವ ಗ್ರಾಮೀಣ ಪ್ರದೇಶವಾದ ಗಂಗೊಳ್ಳಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಸಮರ್ಪಕವಾದ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದ ಇಲ್ಲಿರುವ ಮುಖ್ಯ ರಸ್ತೆಗಳ ಬದಿ, ಖಾರ್ವಿಕೇರಿಯಲ್ಲಿರುವ ರಸ್ತೆ ಬದಿಗಳು, ಮಾತ್ರವಲ್ಲ ಪ್ರಮುಖವಾದ ಮಡಿವಾಳ ಕೆರೆ ಡಂಪಿಂಗ್‌ ಯಾರ್ಡ್‌ಗಳಾಗುತ್ತಿವೆ. 

ಕೆಲ ತಿಂಗಳ ಹಿಂದೆ ಗಂಗೊಳ್ಳಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹ ಕಾರ್ಯ ಆರಂಭಗೊಂಡಿತ್ತು. ಅದನ್ನು ಹಸಿ ಹಾಗೂ ಒಣ ಕಸಗಳಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಗ್ರಾ.ಪಂ. ಮಾಡಿತ್ತು. ಪ್ರಾಯೋಗಿಕವಾಗಿ 850 ಮನೆ- ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಿಸಲಾಗುತ್ತಿತ್ತು. ಆದರೆ ಕಳೆದ ಕೆಲ ದಿನಗಳಿಂದ ಅದು ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು  ಗ್ರಾಮಸ್ಥರ ಆರೋಪ.

ಅಲ್ಲಲ್ಲಿ ಪ್ಲಾಸ್ಟಿಕ್‌ ಎಸೆಯುವುದರಿಂದ ರೋಗ, ರುಜಿನಗಳಿಗೆ ದಾರಿ ಮಾಡಿಕೊಟ್ಟಂ ತಾಗುವುದಲ್ಲದೆ, ಜಾನುವಾರುಗಳಿಗೂ ಅಪಾಯ ತಪ್ಪಿದ್ದಲ್ಲ. ಈ ಕಾರಣದಿಂದ ರಸ್ತೆ ಬದಿ ಕಸ ಎಸೆಯಬೇಡಿ ಎನ್ನುವುದಾಗಿ ಆರೋಗ್ಯ ಇಲಾಖೆಯವರು  ಮನವಿ ಮಾಡಿಕೊಂಡಿದ್ದಾರೆ.

5 ಕ್ವಿಂಟಾಲ್‌ ಕಸ ಉತ್ಪತ್ತಿ
ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿ ಸುಮಾರು 1 ಸಾವಿರ ಎಕರೆಯಷ್ಟಿದ್ದು, ಅಂದಾಜು 13 ಸಾವಿರಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. 3,041ರಷ್ಟು ಮನೆ- ವಾಣಿಜ್ಯ ಮಳಿಗೆಗಳಿವೆ. ಇಡೀ ಗ್ರಾಮದಲ್ಲಿ ಒಟ್ಟಾರೆ ಅಂದಾಜು ಪ್ರತಿನಿತ್ಯ 500 ಕೆ.ಜಿ. (5 ಕ್ವಿಂಟಾಲ್‌) ನಷ್ಟು ಕಸ ಉತ್ಪತ್ತಿಯಾಗುತ್ತಿದೆ. ಆದರೆ ಈಗ 850 ಮನೆ – ವಾಣಿಜ್ಯ ಮಳಿಗೆಗಳಿಂದ ಪ್ರತಿನಿತ್ಯ ಬರೀ 50 – 60 ಕೆ.ಜಿ.ಯಷ್ಟು ಮಾತ್ರ ಕಸ ಸಂಗ್ರಹವಾಗುತ್ತಿದೆ. 

Advertisement

ಇನ್ನಷ್ಟು ಮನೆಗಳಿಗೆ ವಿಸ್ತರಣೆ
ಗಂಗೊಳ್ಳಿಯಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಸಾಧ್ಯವಾಷ್ಟೂ ಪಂಚಾಯತ್‌ ವತಿಯಿಂದ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಮನೆ – ವಾಣಿಜ್ಯ ಮಳಿಗೆಗಳೂ ಹೆಚ್ಚಿರುವುದರಿಂದ ಸಮರ್ಪಕವಾಗಿ ಆಗುತ್ತಿಲ್ಲ. ಶೀಘ್ರ ಕಸ ಸಂಗ್ರಹಕ್ಕಾಗಿ ಟಾಟಾ ಏಸ್‌ ವಾಹನ ಖರೀದಿಸಲಾಗುವುದು. ಬಳಿಕ ಕಸ ಸಂಗ್ರಹವನ್ನು ಇನ್ನಷ್ಟು ಮನೆಗಳಿಗೆ ವಿಸ್ತರಿಸಲಾಗುವುದು. ಇದಕ್ಕೆ ಜನರ ಸಹಕಾರ, ಸಹಭಾಗಿತ್ವವೂ ಅಗತ್ಯವಾಗಿ ಬೇಕಾಗಿದೆ. ಆದರೆ ರಸ್ತೆ ಬದಿ, ಎಲ್ಲೆಂದರಲ್ಲಿ ಕಸ ಎಸೆಯುವುದು ಸರಿಯಲ್ಲ. 
– ಮಾಧವ, ಗಂಗೊಳ್ಳಿ  ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next