Advertisement

ಗಂಗೊಳ್ಳಿ ಚುನಾವಣೆ ಕಣ: ಪ್ರತಿಷ್ಠೆ ಪಣ

01:15 AM Dec 24, 2018 | Team Udayavani |

ವಿಶೇಷ ವರದಿ : ಗಂಗೊಳ್ಳಿ: ಪಟ್ಟಣ ಪಂಚಾಯತ್‌ ಆಗುವ ಎಲ್ಲ ಅರ್ಹತೆಗಳಿರುವ  ಕುಂದಾಪುರ ತಾಲೂಕಿನ ಅತಿ ದೊಡ್ಡ ಗ್ರಾ.ಪಂ. ಎನ್ನುವ ಹೆಗ್ಗಳಿಕೆ ಹೊಂದಿರುವ ಗಂಗೊಳ್ಳಿಯಲ್ಲಿ ಜ. 2ರಂದು ನಡೆಯಲಿರುವ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಕುಂದಾಪುರ ತಾಲೂಕು, ಬೈಂದೂರು ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಗ್ರಾ.ಪಂ. ನಲ್ಲಿ 8 ಕ್ಷೇತ್ರ, 13 ವಾರ್ಡ್‌ ಹಾಗೂ 33 ಸ್ಥಾನಗಳಿವೆ. ಬಂದರು ಪ್ರದೇಶವಿರುವ, 13 ಸಾವಿರ ಜನಸಂಖ್ಯೆಯಿರುವ ಇಲ್ಲಿ ಮೀನುಗಾರರೇ ಹೆಚ್ಚಿದ್ದಾರೆ. ಒಟ್ಟು 10,456 ಮಂದಿ ಮತದಾರರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. ಹಾಗಾಗಿ ಮೀಸಲಾತಿಯಲ್ಲಿಯೂ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗಿದೆ. ಇರುವ 33 ಸ್ಥಾನಗಳ ಪೈಕಿ 17ರಲ್ಲಿ ಮಹಿಳೆಯರು ಹಾಗೂ 16 ರಲ್ಲಿ ಪುರುಷ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.

Advertisement

5 ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ ಗೆದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಆಗ ಎರಡೂವರೆ ವರ್ಷ ಅಧಿಕಾರ ಪೂರೈಸಿದ ಅಧ್ಯಕ್ಷರು ಮತ್ತೂಬ್ಬರಿಗೆ ಅವಕಾಶ ನೀಡ ಬೇಕಾದಾಗ ಹೊಸ ನಿಯಮದಂತೆ 5 ವರ್ಷ ಅಧ್ಯಕ್ಷರಿಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು 170ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು ಕಾನೂನು ಹೋರಾಟಕ್ಕೆ ಇಳಿದಿದ್ದರಿಂದ ಗಂಗೊಳ್ಳಿಯಲ್ಲಿಯೂ ಆಡಳಿತಾಧಿಕಾರಿಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಅವಧಿ ಮುಗಿದು ಈಗ ಮತ್ತೆ ಚುನಾವಣೆ ನಡೆಯುತ್ತಿದೆ.

ಭಾರೀ ಪೈಪೋಟಿ
ಇಲ್ಲಿರುವ 33 ಸ್ಥಾನಗಳ ಪೈಕಿ ಸಿಪಿಐಎಂ, ಪಕ್ಷೇತರರು ಸ್ಪರ್ಧೆಯಲ್ಲಿದ್ದರೂ ಇಲ್ಲಿ ಸ್ಪರ್ಧೆಯಿರುವುದು ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಮಧ್ಯೆ ಮಾತ್ರ. ಇವರೆಡೂ ಪಕ್ಷಗಳಿಂದಲೂ ತಲಾ 33 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಳೆದ ಬಾರಿ 33 ಸ್ಥಾನಗಳ ಪೈಕಿ 19 ಸ್ಥಾನಗಳಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೇರಿದರೆ, ಕಾಂಗ್ರೆಸ್‌ 14 ಸ್ಥಾನ ಗೆದ್ದಿತ್ತು. ಜೆಡಿಎಸ್‌ ಬೆಂಬಲದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದ್ದರೆ, ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೇರಲು ಪಣ ತೊಟ್ಟಿದೆ. 

20 ಸ್ಥಾನಗಳಲ್ಲಿ ಗೆಲುವು
ಕಳೆದ ಬಾರಿ ನಾವೇ ಅಧಿಕಾರದಲ್ಲಿ ಇದ್ದುದರಿಂದ ಈ ಬಾರಿ ಮತ್ತೆ ಗೆಲುವು ಸಾಧಿಸುವ ವಿಶ್ವಾಸವಿದೆ. 33 ರಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು  ಗೆಲ್ಲುತ್ತಾರೆ.
– ಸದಾನಂದ ಉಪ್ಪಿನಕುದ್ರು, ಕ್ಷೇತ್ರಾಧ್ಯಕ್ಷರು, ಬೈಂದೂರು ಬಿಜೆಪಿ

ಅಧಿಕಾರಕ್ಕೆ ಏರುವ ವಿಶ್ವಾಸ
ಕಳೆದ ಬಾರಿ ಮುಸ್ಲಿಂ ಸಂಘಟನೆಗಳ ಜತೆ ಸ್ವಲ್ಪ ಮಟ್ಟಿನ ಹೊಂದಾಣಿಕೆ ಕೊರತೆಯಿಂದ ಕೆಲ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ ಈ ಬಾರಿ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡಿದೆ. ಮಾತುಕತೆ ಫಲಪ್ರದವಾದರೆ ಕಾಂಗ್ರೆಸ್‌ ಅಧಿಕಾರಕ್ಕೇರುವ ವಿಶ್ವಾಸವಿದೆ. 
– ಸಂಜೀವ ಶೆಟ್ಟಿ, ಅಧ್ಯಕ್ಷರು, ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next