ಗಂಗೊಳ್ಳಿ: ಟೌನ್ ಸೌಹಾರ್ದ ಸಹಕಾರಿ ಸಂಘ ಗಂಗೊಳ್ಳಿ ವತಿಯಿಂದ ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಮುಖ್ಯ ರಸ್ತೆಗೆ 20 ಹೊಸ ಎಲ್‌ಇಡಿ ದಾರಿದೀಪ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಗಂಗೊಳ್ಳಿ ಗ್ರಾ.ಪಂ. ಬಳಿಯಿಂದ ರಥಬೀದಿವರೆಗಿನ ಮುಖ್ಯರಸ್ತೆಯ ಸುಮಾರು 20 ಕಂಬಗಳಿಗೆ ಹೊಸ ಎಲ್‌ಇಡಿ ದಾರಿದೀಪ ಅಳವಡಿಸಿದ್ದಲ್ಲದೆ, ಅದರ ನಿರ್ವಹಣೆಯನ್ನು ಕೂಡ ಸಹಕಾರಿ ಸಂಘ ವಹಿಸಿಕೊಂಡಿದೆ.
ಇದನ್ನು ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಉದ್ಘಾಟಿಸಿ, ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಮತ್ತು ಕಾರ್ಯದರ್ಶಿ ಬಿ.ಮಾಧವ ಅವರಿಗೆ ಹಸ್ತಾಂತರಿಸಿದರು.
ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅಧ್ಯಕ್ಷ ಎಚ್. ಗಣೇಶ ಕಾಮತ್ ಮಾತನಾಡಿ, ದಾರಿ ದೀಪಗಳ ನಿರ್ವಹಣೆಗೆ ಗ್ರಾಮ ಪಂಚಾಯತ್ ಅನುದಾನ ಲಭ್ಯತೆ ಇಲ್ಲದಿರು ವುದರಿಂದ ಸಹಕಾರಿಯ ವತಿಯಿಂದ ಸುಮಾರು 20 ದಾರಿದೀಪ ಅಳವಡಿಸಿ ಅದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಸಹಕಾರಿ ನೋಡಿ ಕೊಳ್ಳಲಿದೆ. ಇದೇ ರೀತಿಯಾಗಿ ಇನ್ನುಳಿದ ಸಹಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಹೆಜ್ಜೆ ಇಟ್ಟರೆ ಗ್ರಾ. ಪಂ.ಗೆ ಹೊರೆ ಕಡಿಮೆಯಾಗಿ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಪಂಚಾಯತ್ ಮನವಿಗೆ ಸ್ಪಂದಿಸಿ, ಹೊಸ ಎಲ್‌ಇಡಿ ದಾರಿದೀಪ ಅಳವಡಿ ಸಿರುವುದು ಶ್ಲಾಘನೀಯ ಎಂದು ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು.
ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಜಿ. ವೆಂಕಟೇಶ ನಾಯಕ್, ಜಿ. ವೆಂಕಟೇಶ ಶೆಣೈ, ಬಿ. ರಾಘವೇಂದ್ರ ಪೈ, ನಾರಾಯಣ ಪೂಜಾರಿ, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ನಾಯಕ್, ಗ್ರಾ. ಪಂ. ಸದಸ್ಯ ನಾಗರಾಜ ಖಾರ್ವಿ, ಬಿ. ಲಕ್ಷ್ಮೀಕಾಂತ ಮಡಿವಾಳ, ಹಿರಿಯರಾದ ಜಿ. ಗೋವಿಂದ್ರಾಯ ಆಚಾರ್ಯ, ಗ್ರಾ.ಪಂ. ಸಿಬಂದಿ ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಸಿಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ವಂದಿಸಿದರು.