Advertisement

ಗಂಗೊಳ್ಳಿ: ಕುಸಿದು ವರ್ಷವಾದರೂ ದುರಸ್ತಿಯಾಗದ ಜೆಟ್ಟಿ

11:46 PM Sep 06, 2019 | Team Udayavani |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕುಸಿದಿದ್ದು, ಅಂದರೆ ಈ ವರ್ಷಕ್ಕೆ ಒಂದು ವರ್ಷವಾಗುತ್ತದೆ. ದುರಸ್ತಿಗೆ ರಾಜ್ಯ ಸರಕಾರದಿಂದ ಅನುದಾನ ಮಂಜೂರಾಗಿದ್ದರೂ, ಇನ್ನೂ ಟೆಂಡರ್‌ ಪ್ರಕ್ರಿಯೇ ಆರಂಭವಾಗಿಲ್ಲ. ಈಗಾಗಲೇ ಮೀನುಗಾರಿಕಾ ಋತು ಆರಂಭವಾಗಿದ್ದು, ಬಂದರಿನಲ್ಲಿ ಬೋಟು ಗಳಿಂದ ಮೀನು ಇಳಿಸಲು, ಬೋಟು ನಿಲುಗಡೆಗೆ ಜಾಗದ ಸಮಸ್ಯೆಯಾಗುತ್ತಿದೆ.

Advertisement

ಮೀನುಗಾರರಿಗೆ ಸಮಸ್ಯೆ
2018ರ ಸೆ. 14 ರಂದು ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೂಂದು ಕಡೆ ಕೂಡ ಸ್ಲ್ಯಾಬ್  ಕುಸಿದಿತ್ತು. ಅನಂತರ ಈ ಎರಡನೇ ಹರಾಜು ಪ್ರಾಂಗಣದಲ್ಲಿ ಮೀನುಗಾರರಿಗೆ ಅಪಾಯ ಎದುರಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಎಲ್ಲ ರೀತಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಿರಲಿಲ್ಲ. ಇದರಿಂದ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ.


ಮತ್ತಷ್ಟು ಕುಸಿಯುವ ಭೀತಿ
ಜೆಟ್ಟಿ ಒಟ್ಟು ಅಂದಾಜು 400 ಮೀ. ಉದ್ದವಿದ್ದು, ಅದರಲ್ಲಿ 100 ಮೀ. ಉದ್ದದ ಜೆಟ್ಟಿ ಈವರೆಗೆ ಕುಸಿದಿದೆ. ಇನ್ನು ಸಮುದ್ರದ ನೀರು ಒಳಗೆ ನುಗ್ಗುತ್ತಿರುವುದರಿಂದ ಜೆಟ್ಟಿಯ ಅಡಿಪಾಯಕ್ಕೆ ಕುತ್ತು ತರುವ ಭೀತಿಯೂ ಎದುರಾಗಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಹರಾಜು ಪ್ರಾಂಗಣದ ಗೋಡೆ, ಜೆಟ್ಟಿ ಎಲ್ಲವೂ ಕುಸಿಯುವ ಸಂಭವ ಇದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ವ್ಯವಸ್ಥೆಯೂ ಇಲ್ಲ
ಸ್ಲ್ಯಾಬ್ ದುರಸ್ತಿಯಾಗುವವರೆಗೆ ಬಂದರಿನ ಬೇರೆ ಕಡೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೀನುಗಾರಿಕಾ ಋತು ಆರಂಭಕ್ಕೂ ಮುನ್ನ ಅಧಿಕಾರಿಗಳು ಹೇಳಿದ್ದರೂ, ಇನ್ನೂ ಪರ್ಯಾಯ ವ್ಯವಸ್ಥೆಯನ್ನೇ ಮಾಡಿಕೊಟ್ಟಿಲ್ಲ. ಇಲ್ಲಿ ಸುಮಾರು 300ಕ್ಕೂ ಮಿಕ್ಕಿ ಪರ್ಸಿನ್‌, 600ಕ್ಕೂ ಹೆಚ್ಚು ಫಿಶಿಂಗ್‌ ಬೋಟ್‌ಗಳಿವೆ. 500ಕ್ಕೂ ಅಧಿಕ ನಾಡದೋಣಿಗಳಿವೆ. ಬಂದರಿನಲ್ಲಿ ಈಗ ಬೋಟ್‌ಗಳನ್ನು ನಿಲ್ಲಿಸಲು ಜಾಗದ ಸಮಸ್ಯೆಯಾಗುತ್ತಿದೆ.

ಬಂದರು ಅಭಿವೃದ್ಧಿಗೆ ಪ್ರಸ್ತಾವ
ಗಂಗೊಳ್ಳಿ ಬಂದರಿನ ಪೂರ್ಣ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದು, ಈಗಾಗಲೇ ಸರಕಾರ 1.98 ಕೋ.ರೂ. ಮಂಜೂರಾತಿ ನೀಡಿದ್ದರೂ, ಇದಕ್ಕಾಗಿ ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಅನುದಾನದಲ್ಲಿ ಜೆಟ್ಟಿ ದುರಸ್ತಿ ಕಷ್ಟ. ಇದಕ್ಕೆ ತಾಗಿಕೊಂಡಿರುವ ಸ್ಲಾéಬ್‌ಗಳ ದುರಸ್ತಿಯೂ ಮಾಡಬೇಕಿದೆ. ಈ ಬಗ್ಗೆ ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಸರಕಾರದ ಮಂಜೂರಾತಿ ದೊರೆತ ಬಳಿಕ ಜೆಟ್ಟಿಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲಿಯವರೆಗೆ ಮೀನುಗಾರಿಕೆಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು.
– ಕೆ.ಗಣೇಶ, ಜಂಟಿ ನಿರ್ದೇಶಕ (ಪ್ರಭಾರ), ಮೀನುಗಾರಿಕಾ ಇಲಾಖೆ ಉಡುಪಿ

ಶೀಘ್ರ ಡ್ರೆಜ್ಜಿಂಗ್‌
ಜೆಟ್ಟಿ ದುರಸ್ತಿಯಾಗುವವರೆಗೆ ಮೀನುಗಾರಿಕೆಗೆ ತೊಂದರೆಯಾಗದಂತೆ ಬಂದರಿನ ಉತ್ತರ ದಿಕ್ಕಿನಲ್ಲಿ ನಿರುಪಯುಕ್ತವಾಗಿರುವ ಕಿರು ಜೆಟ್ಟಿಯನ್ನು ಬಳಸಿಕೊಳ್ಳಲು ಅಧಿಕಾರಿಗಳು ಸೂಚಿಸಿದ್ದು, ಈ ಜೆಟ್ಟಿ ಪ್ರದೇಶದಲ್ಲಿ ಕಲ್ಲು ಹಾಗೂ ಹೂಳು ತುಂಬಿರುವುದರಿಂದ ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು. ಇಲ್ಲಿರುವ ಹೂಳೆತ್ತಲು ಸೋಮವಾರದಿಂದ ಡ್ರೆಜ್ಜಿಂಗ್‌ ಮಾಡಲಾಗುವುದು. ಡ್ರೆಜ್ಜಿಂಗ್‌ ಯಂತ್ರ ಕೊಚ್ಚಿನ್‌ನಿಂದ ಬರಬೇಕಿದ್ದುದರಿಂದ ವಿಳಂಬವಾಗಿದೆ. ಬಳಿಕ ಈ ಜೆಟ್ಟಿ ಪ್ರದೇಶದಲ್ಲಿ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಬಂದರಿನ ದಕ್ಷಿಣ ದಿಕ್ಕಿನಲ್ಲಿರುವ ಜಾಗವನ್ನು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸಿ ಈ ಪ್ರದೇಶದಲ್ಲಿ ಮೀನುಗಾರಿಕೆಗೆ ಅನುವು ಮಾಡಿಕೊಡಲಾಗುವುದು.
– ಉದಯ ಕುಮಾರ್‌, ಸಹಾಯಕ ಎಂಜಿನಿಯರ್‌, ಮೀನುಗಾರಿಕೆ ಮತ್ತು ಬಂದರು ಇಲಾಖೆ

Advertisement

ಕಟ್ಟಡವೇ ಕುಸಿಯಬಹುದು
ಇಲ್ಲಿಯವರೆಗೆ ಕುಸಿದ ಜೆಟ್ಟಿಗೆ ನೀರು ಮಾತ್ರ ಬರುತ್ತಿತ್ತು. ಇನ್ನೀಗ ಮೀನುಗಾರಿಕೆ ಮುಗಿಸಿ ಬರುವ ಬೋಟ್‌ಗಳು ಕೂಡ ಆ ಜೆಟ್ಟಿಗೆ ಬಂದು ಹೊಡೆಯುತ್ತದೆ. ಇದರಿಂದ ಇಡೀ ಕಟ್ಟಡ ಯಾವಾಗ ಕುಸಿಯುತ್ತವೆ ಎನ್ನುವ ಆತಂಕ ಎದುರಾಗಿದೆ. ಹೊಸ ಯೋಜನೆ ಮಾಡಿ, ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುವ ಮಾಹಿತಿಯಿದೆ. ಆದರೆ ಅದಕ್ಕೆ ಯಾವಾಗ ಅನುಮೋದನೆ ಸಿಗುತ್ತದೆ ಎಂದು ಗೊತ್ತಿಲ್ಲ. ಆದಷ್ಟು ಶೀಘ್ರ ಈ ಬಂದರಿನ ದುರಸ್ತಿ ಕಾಮಗಾರಿ ಮಾಡಿದರೆ ಅನುಕೂಲವಾಗಲಿದೆ.
– ರಮೇಶ್‌ ಕುಂದರ್‌, ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next