ಕುಂದಾಪುರ: ಭಾರೀ ಗಾಳಿ, ಮೀನಿನ ಬರದಿಂದಾಗಿ ಕಳೆದ 15 ದಿನಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆಯು ಸೋಮವಾರದಿಂದ ಆರಂಭಗೊಂಡಿದ್ದು, ಮಂಗಳವಾರ ಗಂಗೊಳ್ಳಿ ಹಾಗೂ ಮರವಂತೆ ಮೀನುಗಾರರಿಗೆ ಬೂತಾಯಿ (ಬೈಗೆ) ಮೀನು ಮಾತ್ರ ಬಲೆಗೆ ಬಿದ್ದಿದೆ.
ಆಳ ಸಮುದ್ರದಲ್ಲಿ ಭಾರೀ ಗಾಳಿ, ನೀರಿನ ಬಿಸಿಯಿಂದಾಗಿ ಮೀನು ತೀರಕ್ಕೆ ಬಾರದಿರುವ ಕಾರಣ ಮೀನಿಗೆ ಬರ ಬಂದಂತಾಗಿತ್ತು. ಇದಕ್ಕಾಗಿ ಕೆಲವು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿ
ದ್ದರು. ಆದರೆ ಈಗ ಗಾಳಿಯಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಮಂಗಳವಾರ ಕಡಲಿಗಿಳಿದ ಮೀನುಗಾರರಿಗೆ ಭಾರೀ ಪ್ರಮಾಣದಲ್ಲಿ ಬೂತಾಯಿ ಮೀನು ಸಿಕ್ಕಿದೆ. ಗಂಗೊಳ್ಳಿಯಲ್ಲಿ ಕೆಲವು ಬೋಟುಗಳು ಮಾತ್ರ ಮೀನುಗಾರಿಕೆಗೆ ತೆರಳಿದ್ದು ಅಂದಾಜು 6-7 ಟನ್ ಬೂತಾಯಿ ಸಿಕ್ಕರೆ, ಮರವಂತೆಯಲ್ಲಿಯೂ ಕೆಲವು ದೋಣಿಗಳಿಗೆ ಸುಮಾರು 20 ಟನ್ ಬೂತಾಯಿ ಬಲೆಗೆ ಬಿದ್ದಿದೆ. ಉಳಿದಂತೆ ಅಂಜಲ್, ಬಂಗುಡೆ, ಪಾಂಪ್ಲೆಟ್ ಸಹಿತ ಬೇರೆ ಯಾವುದೇ ತರಹದ ಮೀನು ಸಿಗುತ್ತಿಲ್ಲ.