Advertisement

ಗಂಗೊಳ್ಳಿ: ಮ್ಯಾಂಗನೀಸ್‌ ವಾರ್ಫ್‌ ಜೆಟ್ಟಿ ಸಂಪೂರ್ಣ ಕುಸಿತ

11:50 AM May 05, 2022 | Team Udayavani |

ಗಂಗೊಳ್ಳಿ: ಇಲ್ಲಿನ ಬಂದರಿನ ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ಮೀನುಗಾರಿಕಾ ಬೋಟುಗಳು ತಂಗಲು ಅನುಕೂಲವಾಗುವಂತೆ ನಿರ್ಮಿಸಿರುವ ಜೆಟ್ಟಿ ಸಂಪೂರ್ಣವಾಗಿ ಕುಸಿಯುತ್ತಿದೆ. ಕುಸಿತಕ್ಕೊಳಗಾದ ಜೆಟ್ಟಿ ದುರಸ್ತಿ ಬಗ್ಗೆ ಸಂಬಂಧಿತ ಇಲಾಖೆ ಕ್ರಮ ಕೈಗೊಳ್ಳದಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮೂರು ದಶಕ

ಸುಮಾರು 30 ವರ್ಷಗಳ ಹಿಂದೆ ಮ್ಯಾಂಗನೀಸ್‌ ವಾರ್ಫ್‌ ಪ್ರದೇಶ ದಲ್ಲಿ ಬೋಟುಗಳು ತಂಗಲು ಅನುಕೂಲವಾಗುವಂತೆ ಜೆಟ್ಟಿ ನಿರ್ಮಾಣ ಮಾಡಲಾಗಿತ್ತು. ಜೆಟ್ಟಿ ನಿರ್ಮಾಣದ ಬಳಿಕ ಬಂದರಿನಲ್ಲಿ ಮೀನು ಖಾಲಿ ಮಾಡಿ ಬಂದ ನೂರಾರು ಬೋಟುಗಳು ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ನಿಲ್ಲುತ್ತಿತ್ತು. ಈ ಪ್ರದೇಶ ಅತ್ಯಂತ ಸುರಕ್ಷಿತವಾಗಿದ್ದು ಗಾಳಿ ಮಳೆಯ ಸಂದರ್ಭದಲ್ಲೂ ಬೋಟುಗಳು ಇಲ್ಲಿ ನಿಲ್ಲುತ್ತಿದ್ದವು.

ಕುಸಿಯುತ್ತಿದೆ

ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದ ಮೀನುಗಾರಿಕಾ ಜೆಟ್ಟಿ ಕುಸಿತದ ಭೀತಿಯಲ್ಲಿದೆ. ಕಳೆದು ಕೆಲವು ವರ್ಷಗಳಿಂದ ಶಿಥಿಲಗೊಂಡಿರುವ ಜೆಟ್ಟಿ ಇತ್ತೀಚಿನ ದಿನಗಳಲ್ಲಿ ಕುಸಿಯಲಾರಂಭಿಸಿದೆ. ಜೆಟ್ಟಿಯ ಪಿಲ್ಲರ್‌ಗಳು ಒಂದೊಂದಾಗಿ ಕುಸಿಯುತ್ತಿದೆ. ಜೆಟ್ಟಿಯ ಮೇಲ್ಭಾಗ ಕೂಡ ಬಹಳ ಕ್ಷೀಣವಾಗಿದ್ದು ಕುಸಿತದ ಭೀತಿಯಲ್ಲಿದೆ. ಜೆಟ್ಟಿಯ ಪಿಲ್ಲರ್‌ಗಳು ಕುಸಿದು ಬೀಳುತ್ತಿರುವುದರ ಪರಿಣಾಮ ಜೆಟ್ಟಿ ಮೇಲೆ ಚಟುವಟಿಕೆ ನಡೆಸುವುದು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

Advertisement

ಆಶ್ರಯ

ಬೋಟ್‌ಗಳು ಡೀಸೆಲ್‌ ತುಂಬಿಸಲು, ರಿಪೇರಿ ಮತ್ತಿತರ ಚಟುವಟಿಕೆಗಳಿಗಾಗಿ ಮ್ಯಾಂಗನೀಸ್‌ ವಾರ್ಫ್‌ ಪ್ರದೇಶವನ್ನೇ ಆಶ್ರಯಿಸುವಂತಾಗಿದ್ದು ಜೆಟ್ಟಿ ಕುಸಿತ ಮೀನುಗಾರರ ನಿದ್ದೆಗೆಡಿಸಿದೆ.

ಅನಾದರ

ಕೆಲವು ವರ್ಷಗಳಿಂದ ಜೆಟ್ಟಿ ಕುಸಿಯುತ್ತಿದ್ದರೂ ಸ್ಥಳೀಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜೆಟ್ಟಿ ದುರಸ್ತಿಗೆ ಮೀನುಗಾರರ ಆಕ್ರೋಶಕ್ಕೆ ಗುರಿಯಾಗಿದೆ. ನೂರಾರು ಮೀನುಗಾರರ ಉಪಯೋಗಕ್ಕೆ ದೊರೆಯುತ್ತಿದ್ದ ಜೆಟ್ಟಿ ಶಿಥಿಲಗೊಂಡಿದ್ದು ಕುಸಿತದ ಭೀತಿಯಲ್ಲಿದೆ. ಆದರೂ ಇದರ ದುರಸ್ತಿಗೆ ಇಲಾಖೆ ಮುಂದಾಗುತ್ತಿಲ್ಲ. ಗಂಗೊಳ್ಳಿ ಪ್ರದೇಶದ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವ ಇಲಾಖೆಯ ಅಧಿಕಾರಿಗಳು ಜೆಟ್ಟಿ ಸರಿಪಡಿಸಲು ಮನಸ್ಸು ಮಾಡುತ್ತಿಲ್ಲ. ಜನಪ್ರತಿನಿಗಳು ಇದ್ಯಾವುದೂ ತಮ್ಮ ಗಮನಕ್ಕೆ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.

ನಿಧಾನ ಕಾಮಗಾರಿ

ಅತ್ತ ಮುಖ್ಯ ಬಂದರಿನಲ್ಲಿ ಜೆಟ್ಟಿ ನಿರ್ಮಾಣ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಒಂದೆಡೆ ಮಾರುಕಟ್ಟೆಯೂ ಇಲ್ಲ. ಬಿಸಿಲಿನಲ್ಲಿ ವ್ಯಾಪಾರಿಗಳು ಬಸವಳಿಯಬೇಕಾದ ಸ್ಥಿತಿ ಇದೆ. ಇನ್ನೊಂದೆಡೆ ಕಾಮಗಾರಿಯೂ ನಿಧಾನಕ್ಕೆ ಸಾಗುತ್ತಿದೆ. ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬವಾಗಿ ಒಂದು ಸಂದರ್ಭದಲ್ಲಿ ಕಾಮಗಾರಿ ಸ್ಥಗಿತವಾಗಿದ್ದುದು ಬಳಿಕ ಪುನಾರಂಭಗೊಂಡಿತ್ತು. ಕಾಮಗಾರಿ ವಿಳಂಬವಾಗುತ್ತಿರುವ ಕಾರಣದಿಂದಲೂ ಮೀನುಗಾರರಿಗೆ ಸಮಸ್ಯೆಯಾಗಿದೆ. ಬೇಸಗೆ ಸೀಸನ್‌ ಆವಧಿಯಲ್ಲೇ ಮಾರುಕಟ್ಟೆ ಶೆಡ್‌ ದೊರೆಯದಂತಾಗಿದೆ.

ಕ್ರಮ ವಹಿಸಲಾಗುವುದು

ಗಂಗೊಳ್ಳಿ ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿರುವ ಜೆಟ್ಟಿ ಶಿಥಿಲಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಪ್ರದೇಶವು ಬಂದರು ಇಲಾಖೆ ವ್ಯಾಪ್ತಿಗೆ ಸೇರಿದ್ದು, ಜೆಟ್ಟಿ ದುರಸ್ತಿ ಬಗ್ಗೆ ಕ್ರಮ ವಹಿಸಲಾಗುವುದು. -ಗಣೇಶ್‌ ಕೆ., ಉಪ ನಿರ್ದೇಶಕರು ಮೀನುಗಾರಿಕಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next