Advertisement

ಅಭಿವೃದ್ಧಿಯಾಗದ ಗಂಗೊಳ್ಳಿ ಬಂದರು

06:05 AM May 20, 2018 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ ಎರಡನೇ ಬೃಹತ್‌ ಮೀನುಗಾರಿಕಾ ಬಂದರು ಆಗಿರುವ ಗಂಗೊಳ್ಳಿ ಅಭಿವೃದ್ಧಿಯಾಗದೇ ಮೀನುಗಾರರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಮೊದಲ ಹಂತದ ಕಾಮಗಾರಿ ಮುಗಿದು 7 ವರ್ಷಗಳಾಗಿದ್ದು, ಆ ಬಳಿಕ ಬಂದರಿನಲ್ಲಿ ಯಾವುದೇ ದೊಡ್ಡ ಮಟ್ಟದ ಕಾಮಗಾರಿಯೇ ನಡೆದಿಲ್ಲ. ಜತೆಗೆ ಇಲ್ಲೀಗ ಸ್ಲ್ಯಾಬ್ಗಳು ಕೂಡ ಕುಸಿದಿವೆ. 

Advertisement

ಈ ಋತುವಿನ ಮೀನುಗಾರಿಕಾ ಅವಧಿ ಮುಗಿಯುತ್ತಾ ಬಂದಿದ್ದು, ಇನ್ನು ಕೆಲವೇ ದಿನಗಳ ಮೀನುಗಾರಿಕೆಯಷ್ಟೇ ಬಾಕಿಯಿದೆ. ದೊಡ್ಡ ಬೋಟುಗಳು ಈಗಾಗಲೇ ಮತ್ಸé ಕ್ಷಾಮದಿಂದಾಗಿ ಮೀನುಗಾರಿಕೆ ಸ್ಥಗಿತಗೊಳಿಸಿವೆ. ಈ ನಡುವೆ ಬಂದರಿನಲ್ಲಿ ಹಲವು ಸಮಸ್ಯೆಗಳಿದ್ದು,ಬೋಟುಗಳು ಬಂದು ನಿಲ್ಲುವ ಸ್ಥಳದಲ್ಲಿ ಮೀನುಗಳನ್ನು ತೆಗೆಯಲು ನಿಲ್ಲುವ ಜಾಗ ಅನೇಕ ಕಡೆ ಕುಸಿದು ಬೀಳುವ ಅಪಾಯದಲ್ಲಿದೆ. 

ಹೈಮಾಸ್ಟ್‌  ದೀಪ ಇಲ್ಲ 
ಬೃಹತ್‌ ಗಂಗೊಳ್ಳಿ ಬಂದರಿಗೆ ಒಂದೇ ಒಂದು ಹೈಮಾಸ್ಟ್‌ ದೀಪವಿಲ್ಲ. ಬಂದರು ಇಲಾಖೆಯಿಂದ ಹೈಮಾಸ್ಟ್‌ ದೀಪ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳಿದರೂ ಕೂಡ ಇನ್ನೂ ಅಳವಡಿಸುವ ಕಾರ್ಯ ಮಾತ್ರ ಆಗಿಲ್ಲ. 

3 ಕಡೆ ಸ್ಲ್ಯಾಬ್ ಕುಸಿತ
ಜೆಟ್ಟಿಯಲ್ಲಿ 3 ಕಡೆ ಸ್ಲ್ಯಾಬ್ ಭಾಗಶಃ ಕುಸಿದು ಬಿದ್ದಿದ್ದು, ಅದರಲ್ಲೂ ಒಂದು ಕಡೆಯಂತೂ ಸ್ಲ್ಯಾಬ್ ಸಂಪೂರ್ಣ ಕುಸಿದಿದೆ. ಈವರೆಗೆ ಇಲ್ಲಿ 3 ಮೀನುಗಾರರು ಈ ಸ್ಲಾéಬ್‌ ಕುಸಿತದಿಂದ ಅಡಿಗೆ ಬಿದ್ದಿದ್ದು, ಪಕ್ಕದಲ್ಲೇ ಇದ್ದ ಮೀನುಗಾರರು ಮೇಲೆತ್ತಿದ ಕಾರಣ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ. ಮಲ್ಪೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಆದರೆ ಗಂಗೊಳ್ಳಿ ಬಂದರಿನಲ್ಲಿ ಮಾತ್ರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎನ್ನುವುದು ಇಲ್ಲಿನ ಮೀನುಗಾರರ ಆರೋಪ. ಮಹಿಳಾ ಮೀನುಗಾರರಿಗೆ ವಿಶ್ರಾಂತಿ ಕೊಠಡಿಯಿಲ್ಲ. ಬಂದರಿನ ಸುತ್ತ ಆವರಣ ಗೋಡೆ ನಿರ್ಮಿಸಬೇಕು ಎನ್ನುವ ಬೇಡಿಕೆಯಿದ್ದರೂ  ಅದಿನ್ನೂ  ಈಡೇರುವ ಲಕ್ಷಣ ಮಾತ್ರ ತೋರುತ್ತಿಲ್ಲ. 

2ನೇ ಹಂತದ ಕಾಮಗಾರಿ ಆರಂಭಿಸಲಿ
ಬಂದರಿನ ಮೊದಲ ಹಂತದ ಕಾಮಗಾರಿ ಮುಗಿದು 7 ವರ್ಷ ಕಳೆದರೂ ಇನ್ನೂ ಮೀನುಗಾರಿಕಾ ಇಲಾಖೆಯಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆಯೇ ಹೋಗಿಲ್ಲ. ಬಂದರು ವಿಸ್ತರಣೆಗೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಂಡರೆ ಸಾಕಷ್ಟು ಪ್ರಯೋಜನವಾಗಲಿದೆ.
– ಮೋಹನ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ 

Advertisement

ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಕೆ
ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಪಟ್ಟಿ ಸಿದ್ಧಪಡಿಸಿ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅದರಲ್ಲಿ ಮಹಿಳೆಯರಿಗೆ ವಿಶ್ರಾಂತಿ ಗೃಹ, ದ್ವಿಚಕ್ರ ವಾಹನ ಪಾರ್ಕಿಂಗ್‌ ಸ್ಥಳ, ಬಂದರಿನ ಸುತ್ತ ಆವರಣ ಗೋಡೆ ನಿರ್ಮಾಣ ಸಹಿತ ಅನೇಕ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಲ್ಲದೆ ಪಾರ್ಕಿಂಗ್‌ ಪ್ರದೇಶದಲ್ಲಿದ್ದ ಶೆಡ್‌ಗಳನ್ನು ಬಂದರಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. 
– ಅಂಜನಾದೇವಿ,ಮೀನುಗಾರಿಕಾ ಸಹಾಯಕ ನಿರ್ದೇಶಕಿ, ಗಂಗೊಳ್ಳಿ ಬಂದರು 

–  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next