Advertisement

ಹರಾಜು ಪ್ರಾಂಗಣದ ಮೇಲ್ಛಾವಣಿ ತೆರವು ಕಾರ್ಯ ಆರಂಭ

11:58 PM Feb 17, 2020 | Sriram |

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್  ಕುಸಿದು ಒಂದೂವರೆ ವರ್ಷಗಳೇ ಕಳೆದಿದೆ. ಅನುದಾನ ಬಿಡುಗಡೆಯಾಗದ ಕಾರಣ ಇನ್ನೂ ದುರಸ್ತಿಗೆ ಕಾಲ ಕೂಡಿ ಬಂದಿಲ್ಲ. ಆದರೆ ಕುಸಿದ ಸ್ಲ್ಯಾಬ್ ನಿಂದಾಗಿ ಹರಾಜು ಪ್ರಾಂಗಣವಿರುವ ಸಂಪೂರ್ಣ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದ್ದು, ಈಗ ಪ್ರಾಂಗಣದ ಮೇಲ್ಛಾವಣಿ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಮೀನುಗಾರರ ಆಕ್ಷೇಪ
ಇದರಿಂದ ಈ ಬಗ್ಗೆ ಮೀನು ಗಾರರೊಂದಿಗೆ ನಡೆದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ಎರಡನೇ ಹರಾಜು ಪ್ರಾಂಗಣದ ಸಂಪೂರ್ಣ ಕಟ್ಟಡವನ್ನೇ ಕೆಡವಿ, ದುರಸ್ತಿ ಆಗುವವರೆಗೆ ಈ ಪ್ರದೇಶವನ್ನು ಇಲ್ಲಿ ನಿರ್ಬಂಧಿತ ವಲಯವಾಗಿ ಮಾಡುವ ಬಗ್ಗೆ ಪ್ರಸ್ತಾವವಾಗಿತ್ತು. ಆದರೆ ಇದರಿಂದ ಅಲ್ಲಿ ಈಗಿರುವ 12 ಕೊಠಡಿಗಳನ್ನು ಆಶ್ರಯಿಸಿರುವ ಮೀನುಗಾರರು, ಹಸಿ ಮೀನು ವ್ಯಾಪಾರಸ್ಥರಿಗೆ ಸಮಸ್ಯೆಯಾಗುತ್ತದೆ ಎನ್ನುವ ಆಕ್ಷೇಪ ಮೀನುಗಾರರಿಂದ ವ್ಯಕ್ತವಾಯಿತು.

ಆ ಬಳಿಕ ನಡೆದ ಸಭೆಗಳಲ್ಲಿ ಹರಾಜು ಪ್ರಾಂಗಣದ ಮೇಲ್ಛಾವಣಿ ತೆಗೆದು, ಪ್ರಾಂಗಣದಿಂದ ಈಗಿರುವ 12 ಕೊಠಡಿಗಳನ್ನು ಪ್ರತ್ಯೇಕಿಸಿ ಬಿಡುವ ಕಾಮಗಾರಿ ಮಾಡುವ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ. ಈಗ ಮೇಲ್ಛಾವಣಿ ತೆರವು ಕಾಮಗಾರಿ ಆರಂಭವಾಗಿದೆ.

ದುರಸ್ತಿ ಯಾವಾಗ?
ಇಲ್ಲಿನ ಜೆಟ್ಟಿಯ ಸ್ಲ್ಯಾಬ್ ಕುಸಿದು ಸರಿ ಸುಮಾರು ಒಂದೂವರೆ ವರ್ಷಗಳಿಗೂ ಹೆಚ್ಚು ಸಮಯ ಕಳೆಯಿತು. ಆದರೆ ಇನ್ನೂ ಕುಸಿದ ಬಂದರಿನ ದುರಸ್ತಿಯಾಗಲಿ ಅಥವಾ ಹೊಸದಾಗಿ ಮರು ನಿರ್ಮಾಣ ಕಾಮಗಾರಿಗೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. ಈಗಾಗಲೇ ಪ್ರಸ್ತಾವನೆ ಕಳುಹಿಸಿದರೂ, ಇನ್ನೂ ಯಾವುದೇ ಪ್ರಗತಿ ಮಾತ್ರ ಕಂಡು ಬಂದಿಲ್ಲ.

ಮೇಲ್ಛಾವಣಿ ಮಾತ್ರ ತೆರವು
2ನೇ ಹರಾಜು ಪ್ರಾಂಗಣದ ಜೆಟ್ಟಿಯ ಅಡಿಪಾಯದೊಳಗೆ ನೀರು ನುಗ್ಗುತ್ತಿರುವುದರಿಂದ ಕಟ್ಟಡ ಕುಸಿಯುವ ಭೀತಿಯಿಂದ ಪ್ರಾಂಗಣದ ಮೇಲ್ಛಾವಣಿ ತೆರವು ಮಾಡಲಾಗುವುದು. ಈ 2 ಪ್ರಾಂಗಣಗಳ ಮಧ್ಯೆ ಮತ್ತೂಂದು ತೆರೆದ ಪ್ರಾಂಗಣ ನಿರ್ಮಾಣವಾಗಲಿದೆ.
– ಅಂಜನಾದೇವಿ, ಸ.ನಿ.,
ಮೀನುಗಾರಿಕಾ ಇಲಾಖೆ

Advertisement

100 ಮೀ.ಗೆ ವಿಸ್ತರಿಸಲಿ
ಕಟ್ಟಡಕ್ಕೆ ಆತಂಕ ಎದುರಾಗಿದ್ದರಿಂದ ಹಸಿ ಅನೇಕ ಬಾರಿ ಈ ಮೇಲ್ಛಾವಣಿ ತೆಗೆಯಲು ಮನವಿ ಕೊಟ್ಟಿದ್ದೆವು. ಈಗ ತೆರವು ಕಾರ್ಯ ನಡೆಯುತ್ತಿದೆ. ಆದರೆ ದುರಸ್ತಿಗೆ ಮುಂದಾಗಿಲ್ಲ. ಇನ್ನು ಈ ಎರಡು ಪ್ರಾಂಗಣಗಳ ಮಧ್ಯೆ ಮತ್ತೂಂದು ಕಿರು ಪ್ರಾಂಗಣ ನಿರ್ಮಾಣವಾಗಲಿದೆ. ಮೊದಲ ಪ್ರಾಂಗಣದಿಂದ 2ನೇ ಪ್ರಾಂಗಣದ ಮಧ್ಯೆ 106 ಮೀ. ಜಾಗವಿದೆ. ಅಷ್ಟು ಉದ್ದದ ಪ್ರಾಂಗಣ ನಿರ್ಮಿಸಿದರೆ ಮಳೆಗಾಲದ ಸಮಯದಲ್ಲಿ ಸಾಕಷ್ಟು ಅನುಕೂಲವಾಗಲಿದೆ.
– ವಾಸುದೇವ ಖಾರ್ವಿ, ಹಸಿ ಮೀನು ವ್ಯಾಪಾರಸ್ಥರ ಸಂಘ ಗಂಗೊಳ್ಳಿ

ಕಿರು ಪ್ರಾಂಗಣ
ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ಈಗಿರುವ 1 ಹಾಗೂ 2ನೇ ಹರಾಜು ಪ್ರಾಂಗಣಗಳ ಮಧ್ಯೆ ಅಂದಾಜು 1.3 ಕೋ.ರೂ. ವೆಚ್ಚದಲ್ಲಿ 35 ಮೀ. ಉದ್ದ ಹಾಗೂ 15 ಮೀ. ಅಗಲದ 4 ಸುತ್ತಲು ತೆರೆದ ಕಿರು ಪ್ರಾಂಗಣ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿದೆ. ಎರಡನೇ ಹರಾಜು ಪ್ರಾಂಗಣದ ಮೇಲ್ಛಾವಣಿ ತೆರವಾದ ಕೂಡಲೇ ಈ ಕಿರು ಪ್ರಾಂಗಣ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next