Advertisement

ಮತ್ಸ್ಯಕ್ಷಾಮದ ಭೀತಿಯಲ್ಲಿ ಗಂಗೊಳ್ಳಿ ಮೀನುಗಾರರು

06:00 AM Mar 10, 2018 | Team Udayavani |

ಗಂಗೊಳ್ಳಿ: ಸಮೃದ್ಧ ಮೀನುಗಾರಿಕೆ ನಡೆಸುತ್ತಿದ್ದ ಪ್ರದೇಶದಲ್ಲಿ ಇಂದು ಆತಂಕ. ಇಂದಿನದು ಇಂದಿಗೆ, ನಾಳೆಯದು ನಾಳೆಗೆ ಎಂಬ ಪರಿಸ್ಥಿತಿ. ಸಾಕಷ್ಟು ಒಳ್ಳೆ ಮೀನು ಸಿಗುತ್ತಿಲ್ಲ ಎಂಬ ಕೊರಗು. ಇದು ಸದ್ಯ ಗಂಗೊಳ್ಳಿ ಮೀನುಗಾರರ ಪರಿಸ್ಥಿತಿ. ಕಾರಣ ಈ ಭಾಗದಲ್ಲೀಗ ಮತ್ಸ್ಯಕ್ಷಾಮದ ಭೀತಿ ತಲೆದೋರಿದೆ.  

Advertisement

ತಡವಾಗಿ ಮೀನುಗಾರಿಕೆ 
ಸರಕಾರದ ನಿಯಮದಂತೆ ವರ್ಷಕ್ಕೆ 9 ತಿಂಗಳು ಮೀನುಗಾರಿಕೆ ಮಾಡಬಹುದು. ಆದರೆ ಹವಾಮಾನ ಅಷ್ಟೆಲ್ಲ ಅವಕಾಶ ಕಲ್ಪಿಸುವುದಿಲ್ಲ. ಈ ಬಾರಿ ಒಖೀ ಚಂಡಮಾರುತ ಪರಿಣಾಮ ಮೀನುಗಾರಿಕೆ ಸಾಕಷ್ಟು ತಡವಾಗಿ ಶುರುವಾಗಿದೆ. ಮೀನಿನ ಪ್ರಮಾಣ ಇಳಿಕೆಯಾಗಿ ಅದೆಷ್ಟೋ ಬೋಟುಗಳು ಖಾಲಿಯಾಗಿ ಬರುತ್ತಿವೆ.
  
ಕಾರಣವೇನು?
ಅವ್ಯಾಹತ ಆಳಸಮುದ್ರ ಮೀನುಗಾರಿಕೆ ಹಾಗೂ ಲೈಟ್‌ಫಿಶಿಂಗ್‌ನಿಂದಾಗಿ ಸಾಂಪ್ರದಾಯಿಕ ಮೀನುಗಾರರಿಗೆ ತೊಂದರೆಯಾಗಿದೆ. ಇಂತಹ ಮೀನುಗಾರಿಕೆ ಮತ್ಸ್ಯ ಸಂತತಿ ಅಳಿಯಲು ಕೂಡಾ ಕಾರಣವಾಗುತ್ತದೆ ಎನ್ನುತ್ತಾರೆ ಮೀನುಗಾರ ಮಹಿಳೆಯರು. ರಾತ್ರಿ ವೇಳೆ ದೊಡ್ಡ ಲೈಟ್‌ ಅಳವಡಿಸಿ ಮೀನುಗಳನ್ನು ಆಕರ್ಷಿಸಿ ನಡೆಸುವ ಲೈಟ್‌ಫಿಶಿಂಗ್‌ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾಗಿದೆ. ಕರ್ನಾಟಕದಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಇದರಿಂದ ಸಾಂಪ್ರದಾಯಿಕ ಮೀನುಗಾರರು ಕಂಗಾಲಾಗಿದ್ದಾರೆ.  

ಡೀಸೆಲ್‌ /ಸೀಮೆಣ್ಣೆ  ಸಬ್ಸಿಡಿ ಸಮಸ್ಯೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಜತೆಗೆ ಉದ್ಯಮ ಪೂರಕ ವಸ್ತುಗಳ ಮೇಲೆ ಜಿಎಸ್‌ಟಿ ಬಿದ್ದುದೂ ಮತ್ಸೋÂದ್ಯಮದ ಮೇಲೆ ಕರಿಛಾಯೆ ಬಿದ್ದಂತಾಗಿದೆ.

ಮೀನುಗಾರರಿಗೆ ಆತಂಕ!
35 ಪಸೀನ್‌ ಬೋಟುಗಳು, 100 (ಸಣ್ಣ) ಟ್ರಾಲ್‌ ಬೋಟ್‌ಗಳು, 40 ಜೋಡಿ ನಾಡದೋಣಿ (ಮೂರು ದೋಣಿ ಸೇರಿಸಿ ಒಂದು ನಾಡದೋಣಿ ಮಾಡಲಾಗುತ್ತದೆ) ಮೀನುಗಾರಿಕೆ ನಡೆಸುತ್ತವೆ. ಸುಮಾರು 4 ಸಾವಿರದಷ್ಟು ಮಹಿಳಾ ಮತ್ತು ಪುರುಷ ಮೀನುಗಾರರಿದ್ದಾರೆ. ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡಿಗೆ ಮೀನು ರಫ್ತಾಗುತ್ತದೆ. ಆದರೆ ಮೀನು ಕಡಿಮೆ ಸಿಗುತ್ತಿರುವುದು ಇವರನ್ನೆಲ್ಲ ಆತಂಕಕ್ಕೆ ತಳ್ಳಿದೆ. 

ಒಂದೊಂದೇ ಮತ್ಸ್ಯಗಂಧ ಲಾರಿಗಳು ಚಲಿಸಲಾರಂಭಿಸಿದರೆ ರಾತ್ರಿ 2 ಗಂಟೆಯಿಂದ ವಿವಿಧ ಮಾರುಕಟ್ಟೆಗಳನ್ನು ತಲುಪಿ ಮಾರಾಟಕ್ಕೆ ಸಿದ್ಧವಾಗುತ್ತದೆ. 

Advertisement

ಮೀನಿಲ್ಲ…
ಮೊದಲೆಲ್ಲ 50-60 ಲಾರಿಗಳು ಭರ್ತಿ ಮೀನು ಹೇರಿಕೊಂಡು ಗಂಗೊಳ್ಳಿಯಿಂದ ಬಿಡುತ್ತಿದ್ದವು. ಈಗ ಕೆಲವೊಮ್ಮೆ 4-5 ಆಗುವುದೂ ಕಷ್ಟ. ಟ್ರಾಲ್‌ ಬೋಟ್‌ನವರಿಗೆ ಮೊದಲೆಲ್ಲ 150 ಕೆಜಿ ಸಿಗಡಿ ಮೀನು ಸಿಗುತ್ತಿದ್ದರೆ ಈಗ 40 ಕೆಜಿಯಷ್ಟೇ ದೊರೆಯುತ್ತದೆ. ಸಬ್ಸಿಡಿಯಲ್ಲಿ ಡೀಸೆಲ್‌ ದೊರೆತರೂ ಡೀಸೆಲ್‌ ದರಕ್ಕೂ ದೊರೆಯುತ್ತಿರುವ ಮೀನು ಮಾರಾಟ ದರಕ್ಕೂ ತಾಳೆಯಾಗುತ್ತಿಲ್ಲ. ಬೈಗೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ಮನೆ ಮನೆಗಳಿಗೆ ನಿತ್ಯ ತೆರಳಿ ವ್ಯಾಪಾರ ಮಾಡುತ್ತಿದ್ದ ಸಣ್ಣ ವ್ಯಾಪಾರಿಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಸಾಲು ಸಾಲು ಲಾರಿಗಳು ಕೊಂಡೊಯ್ಯಲು ಮೀನಿಲ್ಲದೇ ಬೀಡುಬಿಟ್ಟಿವೆ.

ಕಡಿವಾಣ ಹಾಕಲಿ
ನಿಷೇಧಕ್ಕೊಳಗಾದ ಮೀನುಗಾರಿಕೆಗೆ ಕಡಿವಾಣ ಹಾಕಿದರೆ ಎಲ್ಲರಿಗೂ ಅನುಕೂಲ. ಇಲ್ಲದಿದ್ದರೆ ಶ್ರೀಮಂತರಿಗಷ್ಟೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕಾರ್ಯಕ್ಕೆ ಯಾರೂ ಬೆಂಬಲ ಕೊಡಬಾರದು.
– ರಾಮಪ್ಪ ಖಾರ್ವಿ, ಮೀನುಗಾರರು.

ಎಲ್ಲರಿಗೂ ತೊಂದರೆ
ಮೀನುಗಾರಿಕೆಗೆ ಹೊಡೆತ ಬಿದ್ದರೆ ಕೇವಲ ಮೀನುಗಾರರಿಗೆ ಮಾತ್ರ ತೊಂದರೆಯಲ್ಲ. ಅದನ್ನು ನಂಬಿಕೊಂಡ ಎಲ್ಲ ಉದ್ಯಮಗಳಿಗೂ ಕಷ್ಟ. ಐಸ್‌, ವಾಹನ ಚಾಲಕರು, ಮೀನು ಮಾರಾಟಗಾರರು, ಕಾರ್ಮಿಕರು ಹೀಗೆ ಎಲ್ಲರೂ ಕಷ್ಟಕ್ಕೊಳಗಾಗುತ್ತಾರೆ.
– ಹರೀಶ ಮೇಸ್ತ, ಐಸ್‌ಪ್ಲಾಂಟ್‌ ಮಾಲಕರು.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next