Advertisement

Gangolli: ಗೋ ಸಾಗಾಟ ಕಾರಿಗೆ ನಕಲಿ ನಂಬರ್‌ ಪ್ಲೇಟ್‌

08:19 PM Sep 13, 2024 | Team Udayavani |

ಗಂಗೊಳ್ಳಿ: ಜಾನುವಾರುಗಳನ್ನು ಕಳವು ಮಾಡಲು ಬಂದ ಗೋ ಕಳ್ಳರು ಪೊಲೀಸರು ಬೆನ್ನಟ್ಟಿದಾಗ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಕಳವು ಮಾಡಿದ ಜಾನುವಾರು ಮತ್ತು ತಂದ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾದ ಘಟನೆ ಗಂಗೊಳ್ಳಿ ಸಮೀಪದ ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಕಳವುಗೈಯಲು ತಂದ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ಹಾಕಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

Advertisement

ಗುಜ್ಜಾಡಿ ಗ್ರಾಮ ನಾಯಕವಾಡಿಯಲ್ಲಿರುವ ರಾಮ ದೇವಸ್ಥಾನದ ಹಾಲ್‌ನಲ್ಲಿ ಉಳಿದುಕೊಂಡಿರುವ ಡಿಎಆರ್‌ ಸ್ಟ್ರೈಕಿಂಕ್‌ ಪೋರ್ಸ್‌ನ ಸಿಬ್ಬಂದಿಗಳಾದ ರಾಜೇಶ್‌ ಮತ್ತು ಭರತ್‌ ಸೆ.12ರಂದು ಬೆಳಗಿನ ಜಾವ 4.20 ಹೊತ್ತಿಗೆ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಾಗ ಹಾಲ್‌ನ ಬಳಿಯ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಒಂದು ಜಾನುವಾರನ್ನು ಹಿಡಿದು ಬಲವಂತವಾಗಿ ಎಳೆದುಕೊಂಡು ಹೋಗುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡ ಪೊಲೀಸ್‌ ಸಿಬ್ಬಂದಿಗಳು ಅಲ್ಲಿಗೆ ಹೋಗುತ್ತಿರುವುದನ್ನು ನೋಡಿ ಗೋ ಕಳ್ಳರು ಜಾನುವಾರನ್ನು ಮತ್ತು ಜಾನುವಾರನ್ನು ಸಾಗಿಸಲು ತಂದ ಕಾರನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗೋ ಕಳ್ಳರು ರಸ್ತೆ ಬಳಿ ನಿಲ್ಲಿಸಿದ್ದ ಬಿಳಿ ಬಣ್ಣದ ರಿಟ್ಜ್ ಕಾರನ್ನು ಪರಿಶೀಲಿಸಿದಾಗ ಕಾರಿನ ಹಿಂಬದಿಯ ಸೀಟು ತೆಗೆದಿದ್ದು ಕಾರಿನೊಳಗೆ ನೀಲಿ ಬಣ್ಣದ ಪ್ಲಾಸ್ಟಿಕನ್ನು ಹಾಸಿ ಮೂರು ಜಾನುವಾರುಗಳ ಕಾಲುಗಳನ್ನು ಹಾಗೂ ಕುತ್ತಿಗೆಯನ್ನು ಕಟ್ಟಿರುವುದು ಕಂಡು ಬಂದಿದೆ. ಆರೋಪಿಗಳು ಮೂರು ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ತಂದು ಅದನ್ನು ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿ ತಂದಿದ್ದಾರೆ ಎನ್ನಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ ಹಾಗೂ ಗುಜ್ಜಾಡಿ ಭಾಗಗಳಲ್ಲಿ ನಿರಂತರವಾಗಿ ಗೋ ಕಳ್ಳತನ ಆಗುತ್ತಿದ್ದು, ಗುರುವಾರ ಬೆಳಗಿನ ಜಾವ ಗೋ ಕಳ್ಳತನಕ್ಕೆ ಯತ್ನ ನಡೆದಿದೆ. ಗೋ ಕಳ್ಳರು ಕಾರಿನಲ್ಲಿ ಮೂರು ಜಾನುವಾರನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಘಟನೆಯನ್ನು ಹಿಂದು ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂಜಾವೇ ಉಡುಪಿ ಜಿಲ್ಲಾ ಸಂಚಾಲಕ ಶಂಕರ ಕೋಟ ತಿಳಿಸಿದ್ದಾರೆ.

ನಕಲಿ ನಂಬರ್‌ ಪ್ಲೇಟ್‌
ಗೋ ಕಳ್ಳರು ಜಾನುವಾರನ್ನು ಸಾಗಾಟ ಮಾಡುತ್ತಿದ್ದ ಕಾರಿನ ನಂಬರ್‌ ಪ್ಲೇಟ್‌ ನಕಲಿ ಎನ್ನಲಾಗುತ್ತಿದ್ದು, ಕಾರಿನ ನಂಬರ್‌ ಪ್ಲೇಟ್‌ ಬದಲಾಯಿಸಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ತಿಂಗಳ ಹಿಂದೆ ಗಂಗೊಳ್ಳಿಯ ರಥಬೀದಿಯಲ್ಲಿ ಮೂರು ಬಾರಿ ಗೋ ಕಳ್ಳತನಕ್ಕೆ ಯತ್ನ ನಡೆದಿದ್ದರೆ, ಸಮುದ್ರ ತೀರದಲ್ಲಿ ಚೀಲದಲ್ಲಿ ಮೂರು ಜಾನುವಾರುವಿನ ಕಳೆಬರ ಪತ್ತೆಯಾಗಿತ್ತು, ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next