Advertisement

Gangolli ಜಾಮೀನಿನಲ್ಲಿ ಬಂದು ವಾರದಲ್ಲಿ ಕದ್ದು ಸಿಕ್ಕಿಬಿದ್ದ

12:04 AM Jun 25, 2024 | Team Udayavani |

ಗಂಗೊಳ್ಳಿ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಬಳಿ ಇರುವ ಪಂಚಗಂಗಾ ಸೊಸೈಟಿಯಲ್ಲಿ ಜೂ. 22ರ ತಡರಾತ್ರಿ ಕಳ್ಳತನ ಮಾಡುತ್ತಿದ್ದಾಗಲೇ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

13 ಕಳವು ಪ್ರಕರಣ
ಆರೋಪಿ ಕೊಲ್ಲಂ ಜಿಲ್ಲೆ ಕರುನಾಗಪಳ್ಳಿ ತಾಲೂಕು ಚೆರಿಯಳ್ಳಿಕಲ್‌ ಅಲಪ್ಪಾಡ್‌ ತಾಝಃಚೆಯಿಲ್‌ ವೀಡು ಪ್ರಕಾಶ್‌ ಬಾಬು ಯಾನೆ‌ ನಿಯಾಝ್ (46) ಕುಂಬಳೆ ಪೊಲೀಸ್‌ ಠಾಣೆಯಲ್ಲಿ, ಕ್ಯಾಲಿಕಟ್‌ನ ಮಾರಾಡ ಠಾಣೆ, ತಲಶೆÏàರಿ ಠಾಣೆ, ಕಣ್ಣೂರು ನಗರ ಠಾಣೆ, ಅಲೆಪ್ಪಿ ಮಾವಿಲಕಾರ ಠಾಣೆ, ಚೆಂಗನೂರು ಠಾಣೆ, ಉಡುಪಿ ಜಿಲ್ಲೆಯ, ಗಂಗೊಳ್ಳಿ ಠಾಣೆ, ಕುಂದಾಪುರ ಠಾಣೆ, ದ.ಕ. ಜಿಲ್ಲೆಯ ಕೊಣಾಜೆ ಠಾಣೆ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್‌ ಠಾಣೆ ವ್ಯಾಪ್ತಿ ಸೇರಿ 13 ಕಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಸ್ಕೂಟರ್‌ನಲ್ಲಿ ಕೇರಳದಿಂದ ಬಂದಿದ್ದ
ಜೂ. 15ರಂದು ಕೇರಳದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ಸರಹದ್ದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿದ್ದ ಈತ ಕೇರಳದಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಅಲ್ಲಿಂದ ಕುಂದಾಪುರ, ಮುಳ್ಳಿಕಟ್ಟೆಗೆ ಸ್ಕೂಟರ್‌ನಲ್ಲಿ ಬಂದಿದ್ದ.

ಲಘುವಾಗಿ ಪರಿಗಣಿಸಿದ್ದನೇ?
ರಾತ್ರಿ ಪಂಚಗಂಗಾ ಸೊಸೈಟಿಯ ಹಿಂಬದಿಯ ಕಿಟಕಿ ಮುರಿದು ಸೊಸೈಟಿಗೆ ನುಗ್ಗಿದ ಕಳ್ಳ ಸಿಸಿ ಟಿವಿ ಕೆಮರಾ ಇರುವುದನ್ನು ಗಮನಿಸಿದ್ದ. ಸ್ವಿಚ್‌ ಹಾಕಿ ಲೈಟ್‌ ಕೂಡಾ ಬೆಳಗಿಸಿ ಕೋಣೆಯೆಲ್ಲ ಬೆಲೆಬಾಳುವ ವಸ್ತು, ಹಣಕ್ಕಾಗಿ ತಡಕಾಡಿದ್ದ. ಆದರೆ ಅಲ್ಲಿದ್ದ ಸಿಸಿ ಟಿವಿ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ 24 ತಾಸು ನೇರ ವೀಕ್ಷಣೆಯ ಟಿವಿ ಎಂದು ಗೊತ್ತಾಗದೇ ಸಿಕ್ಕಿಬಿದ್ದ. ನೇರ ವೀಕ್ಷಣೆ ಮಾಡುತ್ತಿದ್ದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಸಿಬಂದಿ ತತ್‌ಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ರಾತ್ರಿ ರೌಂಡ್ಸ್‌ನಲ್ಲಿ ಬಂಟ್ವಾಡಿ ಸಮೀಪವಿದ್ದ ಪಿಎಸ್‌ಐ ಬಸವರಾಜ ಕನಶೆಟ್ಟಿ ಅವರು 5 ನಿಮಿಷದ ಒಳಗೆ ತಲುಪುವಂತೆ ಮಾಡಿದರು. ಪೊಲೀಸ್‌ ಸಿಬಂದಿ ಮೋಹನ ಪೂಜಾರಿ ಹಾಗೂ ಎಸ್‌ಐ ಘಟನ ಸ್ಥಳಕ್ಕೆ ತೆರಳಿ ಕಿಟಕಿ ಮೂಲಕವೇ ಕಳ್ಳನಿಗೆ ಪೊಲೀಸ್‌ ಬಂದುದನ್ನು ತಿಳಿಸಿ ಎಚ್ಚರಿಸಿ ಅಲ್ಲೇ ಇರುವಂತೆ ಮಾಡಿದರು. ಬ್ರಾಂಚ್‌ ಮ್ಯಾನೇಜರ್‌ ಹಾಗೂ ಸಿಬಂದಿ ಸ್ಥಳಕ್ಕೆ ಬಂದ ಬಳಿಕ ಬಾಗಿಲು ತೆರೆದು ಕಳವು ಮಾಡುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ.

ಸ್ವಾಧೀನ
ಆರೋಪಿಯಿಂದ ಕಳವು ಮಾಡಿದ ನಗದು 2 ಸಾವಿರ ರೂ., ಕಳವು ಮಾಡಲು ಬಂದ ಸುಝುಕಿ ಎಕ್ಸೆಸ್‌ ಮೋಟಾರು ಸೈಕಲ್‌, ಮೊಬೈಲ್‌, ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್‌, ಕಟ್ಟಿಂಗ್‌ ಪ್ಲೇಯರ್‌ ಇನ್ನಿತರ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next