Advertisement

ಗಂಗೊಳ್ಳಿ : ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಪ್ರಯತ್ನ

06:20 AM Sep 29, 2018 | Team Udayavani |

ಗಂಗೊಳ್ಳಿ: ಗಂಗೊಳ್ಳಿ ಗ್ರಾ. ಪಂ. ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಲು ಎಲ್ಲ ಅರ್ಹತೆ ಹೊಂದಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

Advertisement

ಅವರು ಶುಕ್ರವಾರ ಗಂಗೊಳ್ಳಿ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ, ಗ್ರಾಮ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಕೆಎಫ್‌ಡಿಸಿಯಿಂದ ನಿರ್ಮಾಣಗೊಂಡ ಮೀನು ಮಾರುಕಟ್ಟೆ ಕಾಮಗಾರಿ ಅಪೂರ್ಣಗೊಂಡಿದ್ದು ಮತ್ತು ಪಂಚಾಯತ್‌ ಅನುದಾನದಿಂದ ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಕೆಎಫ್‌ಡಿಸಿ ವಿರುದ್ಧ ಸೂಕ್ತ ತನಿಖೆ ನಡೆಸಲು ಸೂಚನೆ ನೀಡಲಾಗುವುದು. ಮ್ಯಾಂಗನೀಸ್‌ ರಸ್ತೆ ಪ್ರದೇಶದ ಜಾಗ ಬಂದರು ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಗೊಂಡಿದ್ದು, ಇಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು, ಮೇಲ್‌ಗ‌ಂಗೊಳ್ಳಿಯ 20 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸ್ಮಶಾನ ಜಾಗ ವಿಂಗಡಿಸುವಂತೆ ಡಿಸಿಗೆ ಸೂಚನೆ ನೀಡಲಾಗುವುದು ಎಂದರು.

848 ಮಂದಿಗೆ ನಿವೇಶನಕ್ಕೆ ಪ್ರಯತ್ನ
ಗ್ರಾ. ಪಂ. ವ್ಯಾಪ್ತಿಯಲ್ಲಿ ಮಂಜೂರಾದ 63 ಮನೆಗಳ ಪೈಕಿ 18 ಮನೆಗಳು ಪೂರ್ಣಗೊಂಡಿದ್ದು, 848 ನಿವೇಶನ ರಹಿತರಿಗೆ ನಿವೇಶನ ಮತ್ತು 388 ವಸತಿ ರಹಿತರಿಗೆ ವಸತಿ ನೀಡುವ ಸಂಬಂಧ ಸರಕಾರದ ಗಮನ ಸೆಳೆಯಲಾಗುವುದು. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ 18 ಫಲಾನುಭವಿಗಳ ಅರ್ಜಿ ತಿರಸ್ಕೃತಗೊಂಡಿದ್ದು, 5 ಅರ್ಜಿಗಳು ಇತ್ಯರ್ಥಗೊಳ್ಳದೆ ಬಾಕಿಯಿದೆ. ಬೇಲಿಕೇರಿ ಪ್ರದೇಶದ 40 ಅರ್ಜಿಗಳು ಸಿಆರ್‌ಝಡ್‌ ಕಾನೂನಿನಿಂದ ಹಕ್ಕು ಪತ್ರ ವಿತರಿಸಲು ಸಾಧ್ಯವಾಗಿಲ್ಲ ಎಂದವರು ಹೇಳಿದರು. 

ಅಧಿಕಾರಿಗಳ ಸಭೆ
ಬೈಂದೂರು ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಮಾತನಾಡಿ, ಗಂಗೊಳ್ಳಿಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಲಾಗುವುದು. ಗಂಗೊಳ್ಳಿಯ ದೊಡ್ಡಹಿತ್ಲು ಚರಂಡಿ ಹೂಳೆತ್ತುವ, ಮಲ್ಯರಬೆಟ್ಟು, ದುರ್ಗಾಕೇರಿ ಸ್ಮಶಾನ ದುರಸ್ತಿ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.

Advertisement

ಚರ್ಚ್‌ ರಸ್ತೆಯಲ್ಲಿರುವ ಮಡಿವಾಳರ ಕೆರೆ ಮತ್ತು ಬಂದರು ಸಮೀಪದ ಕೆರೆ ಒತ್ತುವರಿ ತೆರವು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಶೋಭಾ ಪುತ್ರನ್‌, ತಾ. ಪಂ. ಸದಸ್ಯ ಸುರೇಂದ್ರ ಖಾರ್ವಿ, ತಾ. ಪಂ. ಸಹಾಯಕ ನಿರ್ದೇಶಕ ಎಚ್‌.ವಿ.ಇಬ್ರಾಹಿಂಪುರ, ಗ್ರಾ. ಪಂ. ಆಡಳಿತಾಧಿಕಾರಿ ಚಂದ್ರಶೇಖರ್‌, ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್‌ಪೆಕ್ಟರ್‌ ಅಶೋಕ ಕುಮಾರ್‌, ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ‌ ವೈದ್ಯಾಧಿಕಾರಿ ಡಾ| ಶ್ವೇತಾ, ಮೆಸ್ಕಾಂನ ಗಂಗೊಳ್ಳಿ ಶಾಖೆಯ ಜೆಇ ವಿಶ್ವನಾಥ, ಬಂದರು ಇಲಾಖೆಯ ಅಂತೋನಿ, ಸಿಆರ್‌ಪಿ ತಿಲೋತ್ತಮ ನಾಯಕ್‌, ಜಿ.ಪಂ. ಸಹಾಯಕ ಇಂಜಿನಿಯರ್‌ ಶ್ರೀಕಾಂತ್‌, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.ಪಿಡಿಒ ಬಿ.ಮಾಧವ ಸ್ವಾಗತಿಸಿದರು. ಸಿಬಂದಿ ಶೇಖರ್‌ ಜಿ. ವಂದಿಸಿದರು.

ಮೇಲ್ದರ್ಜೆಗೇರಿಸಲು ಮನವಿ
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಸರಕಾರಕ್ಕೆ ಮನವಿ ಮಾಡುತ್ತೇನೆ. ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಲ್ಲಿ ದಾರದೀಪ ಅಳವಡಿಕೆ ಹಾಗೂ ಚರಂಡಿ ದುರಸ್ತಿ ಬಗ್ಗೆ ಬಂದರು ಇಲಾಖೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ, ಗಂಗೊಳ್ಳಿ ವಿದ್ಯುತ್‌ ಉಪಕೇಂದ್ರವನ್ನು 24*7 ಆಗಿ ಮಾಡಲು ಇಲಾಖೆಯ ಮೇಲೆ ಒತ್ತಡ ತರಲಾಗುವುದು, ಗಂಗೊಳ್ಳಿ ಮೀನುಗಾರಿಕಾ ಬಂದರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ಬಂದರಿಗೆ ಭೇಟಿ ನೀಡಲಾಗುವುದು. ಗಂಗೊಳ್ಳಿಗೆ ಅಗತ್ಯವಿರುವ ರಿಂಗ್‌ ರೋಡ್‌ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ ಮೂಲಕ ಅಂದಾಜುಪಟ್ಟಿ ಸಿದ್ಧಪಡಿಸಿ ಕೊಡುವಂತೆ ಕೋಟ ಇದೇ ವೇಳಿ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next