Advertisement

Gangolli: ಶ್ರೀ ಮಹಾಂಕಾಳಿ ದೇಗುಲದ ಅಡವಿರಿಸಿದ್ದ 256 ಗ್ರಾಂ ಚಿನ್ನಾಭರಣ ವಶ

08:10 PM Oct 06, 2024 | Team Udayavani |

ಗಂಗೊಳ್ಳಿ: ಇಲ್ಲಿನ ಖಾರ್ವಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವರ ಮೇಲಿದ್ದ ಚಿನ್ನಾಭರಣಗಳನ್ನು ಪೂಜೆ ಮಾಡುವ ಅರ್ಚಕನೇ ಕಳವುಗೈದು, ವಿವಿಧೆಡೆ ಅಡವಿಟ್ಟಿದ್ದು, ಈಗ ಎಲ್ಲ 256 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಈ ಪ್ರಕರಣ ಸೆ. 21ರಂದು ಬೆಳಕಿಗೆ ಬಂದಿದ್ದು, ಆ ಕೂಡಲೇ ಆರೋಪಿ, ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕ ಶಿರಸಿ ಮೂಲದ ನರಸಿಂಹ ಭಟ್‌ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಬಳಿಕ ಗಂಗೊಳ್ಳಿ ಠಾಣಾ ಎಸ್‌ಐಗಳಾದ ಹರೀಶ್‌ ಆರ್‌., ಬಸವರಾಜ ಕನಶೆಟ್ಟಿ, ಸಿಬಂದಿ ನಾಗರಾಜ, ಶಾಂತರಾಮ ಶೆಟ್ಟಿ, ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ಅವರ ತಂಡವು ವಿಚಾರಣೆ ನಡೆಸಿ, ಆರೋಪಿಯು ಅಡವಿಟ್ಟಿದ್ದ ವಿವಿಧ ಬ್ಯಾಂಕ್‌, ಸಹಕಾರ ಸಂಘಗಳಲ್ಲಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 40 ಗ್ರಾಂ ತೂಕದ 3.20 ಲಕ್ಷ ರೂ. ಮೌಲ್ಯದ ಚಿನ್ನದ ಜೋಬಿನ ಸರ, 73 ಗ್ರಾಂ ತೂಕದ 5.84 ಲಕ್ಷ ರೂ. ಮೌಲ್ಯದ ಚಿನ್ನದ ಕಾಸಿ ತಾಳಿ ಸರ, 73 ಗ್ರಾಂ ತೂಕದ 5.84 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 6 ಗ್ರಾಂ ತೂಕದ 48 ಸಾವಿರ ರೂ. ಮೌಲ್ಯದ 3 ಚಿನ್ನದ ತಾಳಿ, 64 ಗ್ರಾಂ ತೂಕದ 5.12 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್‌ ಸೇರಿದಂತೆ ಒಟ್ಟು 20.48 ಲಕ್ಷ ರೂ. ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ತನ್ನ ಸ್ವಂತಕ್ಕಾಗಿ ದೇವರ ಮೇಲಿದ್ದ ಚಿನ್ನಾಭರಣಗಳನ್ನು ತೆಗೆದು, ನಕಲಿ ಚಿನ್ನಾಭರಣಗಳನ್ನು ಹಾಕಿರುವುದಾಗಿದೆ. ದೇವರ ಚಿನ್ನಾಭರಣಗಳನ್ನು ಆತ ಕುಂದಾಪುರ, ಬೈಂದೂರು ಭಾಗದ ವಿವಿಧ ಬ್ಯಾಂಕ್‌ ಹಾಗೂ ಸೊಸೈಟಿಗಳಲ್ಲಿ ಅಡವಿಟ್ಟಿರುವುದಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅಲ್ಲಿಂದ ದೇವಸ್ಥಾನದವರು ಪಡೆಯಬಹುದಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next