Advertisement
ಅವಶ್ಯಗಂಗೊಳ್ಳಿಯಿಂದ ಕುಂದಾಪುರಕ್ಕೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ಆಗಮಿಸುತ್ತಾರೆ. ಆಸ್ಪತ್ರೆ, ತಾಲೂಕು ಕಚೇರಿ ಮೊದಲಾದ ಕೆಲಸಗಳಿಗೆ, ವ್ಯಾವಹಾರಿಕ ವಾಗಿಯೂ ಗಂಗೊಳ್ಳಿ ಜನರಿಗೆ ಕುಂದಾಪುರದ ಜತೆ ನಿಕಟ ಒಡನಾಟ ಇರುವ ಕಾರಣ ಎರಡು ಊರುಗಳ ನಡುವಿನ ಪ್ರಯಾಣ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಇಲ್ಲೊಂದು ಸೇತುವೆ ಆಗಬೇಕೆಂದು ಬಹಳ ವರ್ಷಗಳಿಂದ ಬೇಡಿಕೆ ಇದೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸೇತುವೆಗಾಗಿ ಅಭಿಯಾನ ಕೂಡಾ ನಡೆಯಿತು.
ಎರಡು ಊರುಗಳು ಕಣ್ಣಳತೆಯಲ್ಲಿದ್ದರೂ ಕಿ.ಮೀ.ಗಳಷ್ಟು ಸುತ್ತಿಕೊಂಡು ತಲುಪುವ ಜನ ಸಾಮಾನ್ಯರ ಕಷ್ಟಕ್ಕೆ ಕೊನೆ ಹಾಡಬೇಕಿದೆ. ಸೇತುವೆ ನಿರ್ಮಿಸಿದರೆ ಜನರ ಸಮಸ್ಯೆ ಪರಿಹಾರದ ಜತೆಗೆ ವ್ಯಾಪಾರ ವಹಿವಾಟು ಅಭಿವೃದ್ಧಿಯಾಗಲಿದೆ. ಪ್ರವಾ ಸೋದ್ಯಮಕ್ಕೂ ನೆರವಾಗಲಿದೆ. ಪಂಚಗಂಗಾವಳಿ ನದಿಯಲ್ಲಿ ಸಣ್ಣ ಕುದ್ರುಗಳು ಇರುವುದರಿಂದ ಸಾಕಷ್ಟು ಪ್ರವಾಸಿಗರನ್ನು ಸೆಳೆಯುವ ತಾಣವಾಗುತ್ತದೆ. ನದಿ ಬಳಿ ಇರುವ ಕುದ್ರುಗಳ ವೀಕ್ಷಣೆಗೆ ಬೋಟಿಂಗ್ ವ್ಯವಸ್ಥೆ ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಅನುಕೂಲ. ಕುದ್ರುಗಳಲ್ಲಿ ಸ್ವತ್ಛತೆ ಕಾಪಾಡಬೇಕು, ಸಂಯಮ ಕಾಪಾಡಬೇಕು. ಈಗಾಗಲೇ ಕೋಡಿಯಲ್ಲಿ ಸೀವಾಕ್ ನಿರ್ಮಾಣ ನಡೆದಿದ್ದು ಸಾವಿರಾರು ಮಂದಿ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ಇಲ್ಲೇ ಸನಿಹದಿಂದ ಸೇತುವೆಯೂ ಆದರೆ ದ್ವೀಪ ಹಾಗೂ 16ನೇ ಶತಮಾನದ ಕೆಳದಿ ಸಂಸ್ಥಾನದ ಪ್ರಮುಖ ಬಂದರು, ಟಿಪ್ಪು ಸುಲ್ತಾನ್ ಹಡಗುಗಳ ನಿರ್ಮಿಸುತ್ತಿದ್ದ ಜಾಗ, ಪೋರ್ಚುಗೀಸರು ಮೊದಲು ವಸಾಹತು ವಶ ಪಡಿಸಿಕೊಂಡ ಪ್ರದೇಶ, ಈಗ 200ಕ್ಕೂ ಹೆಚ್ಚು ಬೋಟ್ ಹೊಂದಿರುವ ಕರ್ನಾಟಕದ ಎರಡನೇ ಅತೀ ದೊಡ್ಡ ಬಂದರಾದ ಗಂಗೊಳ್ಳಿಗೆ ಜನ ಭೇಟಿ ನೀಡಲು ಅನುವಾಗಲಿದೆ. ಮೀನುಗಾರರ ದೋಣಿಗೆ ಆತಂಕ?
ಸೇತುವೆ ನಿರ್ಮಾಣವಾದರೆ ಮೀನುಗಾರರ ದೋಣಿ, ಬೋಟ್‌ಗಳ ಓಡಾಟಕ್ಕೆ ತೊಂದರೆಯಾಗ ಲಿದೆ ಎಂಬ ಅನುಮಾನ ಕೂಡ ಇದೆ. ಈ ನಿಟ್ಟಿನಲ್ಲಿ ಅವರ ಗೊಂದಲ ಪರಿಹರಿಸುವ ಕೆಲಸ ಕೂಡಾ ನಡೆಯಬೇಕಿದೆ. ಸೇತುವೆಯ ಎತ್ತರ ಹೆಚ್ಚಿಸು ವುದು, ಪಿಲ್ಲರ್‌ಗಳನ್ನು ಬೋಟುಗಳ ಓಡಾಟಕ್ಕೆ ತೊಂದರೆಯಾಗದ ಮಾದರಿಯಲ್ಲಿ ನಿರ್ಮಾಣ ಮಾಡುವ ಮೂಲಕ ಮೀನುಗಾರಿಕೆಗೆ ಕಿರುಕುಳ ಆಗದ ರೀತಿಯ ವಿನ್ಯಾಸ ಮಾಡಬೇಕಿದೆ.
Related Articles
ಸೇತುವೆ ನಿರ್ಮಾಣವಾದಲ್ಲಿ ಗಂಗೊಳ್ಳಿ ಕುಂದಾಪುರದ ಭಾಗವಾಗಲಿದೆ. ಇದರಿಂದ ಕುಂದಾಪುರ, ಕೋಟೇಶ್ವರ, ಗಂಗೊಳ್ಳಿ ಭಾಗದ ಜನರಿಗೆ ವರವಾಗಲಿದೆ. ಆದ್ದರಿಂದ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಸಂಸದ ಬಿ. ವೈ. ರಾಘವೇಂದ್ರ ಮನವಿಯಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸೆ. 17ರಂದು ಪತ್ರ ಬರೆದಿದ್ದಾರೆ.
Advertisement
ದೊಡ್ಡ ಕೇಂದ್ರಗಂಗೊಳ್ಳಿ ಪಂಚಾಯನನ್ನು 2022ರಲ್ಲಿ ಪಟ್ಟಣ ಪಂಚಾಯತ್ ಮಾಡುವ ಪ್ರಸ್ತಾವ ಇದೆ. 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ಗಂಗೊಳ್ಳಿ ಬಹಳ ಹಿಂದೆ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಸಾಮಗ್ರಿ ಸಾಗಾಟಕ್ಕೆ ಹೆದ್ದಾರಿಯನ್ನೇ ಅನೇಕರು ಆಶ್ರಯಿಸಿದ ಕಾರಣ ದೊಡ್ಡ ಮೊತ್ತದ ಸೇತುವೆ ಬೇಡಿಕೆಗೆ ಮನ್ನಣೆ ದೊರೆಯಲಿಲ್ಲ. ದೊಡ್ಡ ಆಸ್ಪತ್ರೆ, ಮೀನು ಸಾಗಾಣಿಕೆಗೆ ಕೂಡ ಇಲ್ಲಿ ಸೇತುವೆ ರಚನೆಯಾದರೆ ಅನುಕೂಲವಾಗಲಿದೆ. ಗಂಗೊಳ್ಳಿಯ ಸನಿಹದ ಗುಜ್ಜಾಡಿ, ತ್ರಾಸಿಗೂ ಅನುಕೂಲವಾಗಲಿದೆ. ಇಂಧನ ಉಳಿತಾಯವಾಗಲಿದೆ. 3 ದಶಕಗಳಿಂದ ಬೇಡಿಕೆ
ಈ ಸೇತುವೆಗೆ ಬೇಡಿಕೆ ಇಂದು ನಿನ್ನೆಯದಲ್ಲ. ಮೂವತ್ತು ವರ್ಷಗಳಿಂದ ಬೇಡಿಕೆ ಇದೆ. ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ| ಜಿ.ಎಲ್. ಡಿಲೀಮಾ ಅವರು ಇಂತಹ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿದ್ದರು. ರಿಂಗ್‌ರೋಡ್ ಮಾಡಬೇಕೆಂಬ ಅವರ ಕನಸು ಇಂದು ಸಾಕಾರಗೊಂಡಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಬಬ್ಬುಕುದ್ರು ದ್ವೀಪಕ್ಕೆ ಸೇತುವೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು. ಕುಂದಾಪುರ -ಗಂಗೊಳ್ಳಿ ಸೇತುವೆ ರಚನೆ ಅನಿವಾರ್ಯವನ್ನೂ ಅನೇಕ ಬಾರಿ ಒಪ್ಪಿಕೊಂಡಿದ್ದರು. ಆದರೆ ಅನುದಾನ ಬಿಡುಗಡೆಗೆ ಸ್ಪಂದನ ಮಾತ್ರ ಈವರೆಗೆ ದೊರೆತಿಲ್ಲ . ಸುಂದರ ಕುಂದಾಪುರ
ಸೇತುವೆಯಾದರೆ ಸಾಕಷ್ಟು ಪ್ರವಾಸಿಗರನ್ನು ಸೆಳೆಯುವ ತಾಣವಾಗುತ್ತದೆ. ಕುದ್ರುಗಳಿಗೆ ಬೋಟಿಂಗ್ ವ್ಯವಸ್ಥೆ ಮಾಡಲಿ. ಬೀಚ್ ಬಳಿ ಸ್ವತ್ಛತೆ ಕಾಪಾಡಲಿ. ಈ ಮೂಲಕ ಪ್ರವಾಸೋದ್ಯಮಕ್ಕೂ ನೆರವಾಗಲಿ.
– ಚೇತನ್ ಖಾರ್ವಿ, ಕುಂದಾಪುರ ಬೇಡಿಕೆ ಈಡೇರಲಿದೆ
ಗಂಗೊಳ್ಳಿ ಕುಂದಾಪುರ ಸೇತುವೆ ನಿರ್ಮಾಣಕ್ಕಾಗಿ ಸಂಸದರ ಮೂಲಕ ಮನವಿ ಮಾಡಲಾಗಿದೆ. ಇದು ಬಹಳ ವರ್ಷಗಳಿಂದ ಜನರು ಇಡುತ್ತಿರುವ ಬೇಡಿಕೆಯಾಗಿದ್ದು ಈ ಬಾರಿ ಕೇಂದ್ರದಿಂದ ಅನುದಾನ ಬರುವ ನಿರೀಕ್ಷೆ ಇದೆ. ಈ ಮೂಲಕ 2 ಊರುಗಳ ಅಂತರ ಕಡಿಮೆ ಮಾಡಿ ಐದಾರು ಊರುಗಳ ಜನರಿಗೆ ಪ್ರಯೋಜನವಾಗಲಿದೆ.
– ಬಿ.ಎಂ. ಸುಕುಮಾರ್ ಶೆಟ್ಟಿ ಶಾಸಕರು, ಬೈಂದೂರು ಲಕ್ಷ್ಮೀ ಮಚ್ಚಿನ